18ರ ಯುವತಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ 2022ರಲ್ಲಿ ನ್ಯಾಯಾಲಯವು ಸಂದೀಪ್‌ ಅವರನ್ನು ದೋಷಿ ಎಂದು ತೀರ್ಪು ನೀಡಿ, 8 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಕಠ್ಮಂಡು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನೇಪಾಳ ಕ್ರಿಕೆಟಿಗ ಸಂದೀಪ್‌ ಲಮಿಚ್ಚಾನೆ ನಿರ್ದೋಷಿ ಎಂದು ನೇಪಾಳದ ಪಟಾನ್‌ ಹೈಕೋರ್ಟ್‌ ತೀರ್ಪು ನೀಡಿದೆ. 18ರ ಯುವತಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ 2022ರಲ್ಲಿ ನ್ಯಾಯಾಲಯವು ಸಂದೀಪ್‌ ಅವರನ್ನು ದೋಷಿ ಎಂದು ತೀರ್ಪು ನೀಡಿ, 8 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. 

ಅಲ್ಲದೆ ಅವರು ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಬುಧವಾರ ಪ್ರಕರಣದ ವಿಚಾರಣೆ ಕೊನೆಗೊಳಿಸಿದ ಕೋರ್ಟ್‌ ಸಂದೀಪ್‌ ಅವರನ್ನು ಖುಲಾಸೆಗೊಳಿಸಿದೆ. ಇದರೊಂದಿಗೆ ಸಂದೀಪ್‌ ಐಸಿಸಿ ಟಿ20 ವಿಶ್ವಕಪ್‌ ಆಯ್ಕೆಗೆ ಲಭ್ಯವಿದ್ದು, ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಲೆಗ್‌ ಸ್ಪಿನ್ನರ್‌ ಆಗಿರುವ ಸಂದೀಪ್‌ ನೇಪಾಳ ಪರ 51 ಏಕದಿನ 52 ಟಿ20 ಪಂದ್ಯಗಳನ್ನಾಡಿದ್ದಾರೆ.

ಐರ್ಲೆಂಡ್‌ ವಿರುದ್ಧ ಟಿ20 ಸರಣಿ ಗೆದ್ದ ಪಾಕಿಸ್ತಾನ

ಡಬ್ಲಿನ್‌: ಮೊದಲ ಪಂದ್ಯದ ಆಘಾತಕಾರಿ ಸೋಲಿನ ಹೊರತಾಗಿಯೂ ಐರ್ಲೆಂಡ್‌ ವಿರುದ್ಧ ಟಿ20 ಸರಣಿಯಲ್ಲಿ ಪಾಕಿಸ್ತಾನ 2-1ರಲ್ಲಿ ಕೈವಶಪಡಿಸಿಕೊಂಡಿದೆ. ಮಂಗಳವಾರ ನಡೆದ ಕೊನೆ ಪಂದ್ಯದಲ್ಲಿ ಪಾಕ್‌ಗೆ 6 ವಿಕೆಟ್‌ ಗೆಲುವು ಲಭಿಸಿತು. ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌, ಲಾರ್ಕನ್‌ ಟಕ್ಕರ್(41 ಎಸೆತಗಳಲ್ಲಿ 73) ಅರ್ಧಶತಕದಿಂದಾಗಿ 7 ವಿಕೆಟ್‌ಗೆ 178 ರನ್‌ ಕಲೆಹಾಕಿತು. ಶಾಹೀನ್‌ ಅಫ್ರಿದಿ 14ಕ್ಕೆ 4 ವಿಕೆಟ್‌ ಕಿತ್ತರು. ಸ್ಪರ್ಧಾತ್ಮಕ ಮೊತ್ತವನ್ನು ಪಾಕ್‌ 17 ಓವರಲ್ಲೇ ಬೆನ್ನತ್ತಿ ಜಯಗಳಿಸಿತು. ನಾಯಕ ಬಾಬರ್ ಆಜಂ 75, ರಿಜ್ವಾನ್‌ 56 ರನ್‌ ಗಳಿಸಿದರು.