ಹಾಕಿ ಕೊಡವ ಜನಾಂಗದಲ್ಲಿ ರಕ್ತಗತವಾಗಿದೆ: ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ

| Published : Apr 28 2024, 01:22 AM IST / Updated: Apr 28 2024, 04:11 AM IST

ಹಾಕಿ ಕೊಡವ ಜನಾಂಗದಲ್ಲಿ ರಕ್ತಗತವಾಗಿದೆ: ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಪಾಲ್ಗೊಂಡು ಹೂವಿನ ಕುಂಡಕ್ಕೆ ನೀರು ಹಾಕುವುದರ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

  ನಾಪೋಕ್ಲು  :  ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ 24ನೇ ಕುಂಡ್ಯೋಳಂಡ ಹಾಕಿ ಹಬ್ಬದ ಸೆಮಿ ಫೈನಲ್ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ಎ.ನಾಣಯ್ಯ ವಹಿಸಿದ್ದರು.ಸೆಮಿ ಫೈನಲ್ ಪಂದ್ಯಾವಳಿಯ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಪಾಲ್ಗೊಂಡು ಹೂವಿನ ಕುಂಡಕ್ಕೆ ನೀರು ಹಾಕುವುದರ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಹಾಕಿ ಕೊಡವ ಜನಾಂಗದಲ್ಲಿ ರಕ್ತಗತವಾಗಿದೆ. ಇಂದು ಕೊಡವ ಜನಾಂಗ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಜನಾಂಗದಲ್ಲಿ ಶಿಸ್ತು ಮತ್ತು ಬದ್ದತೆ ಇರುವುದರಿಂದ ಈ ಸಾಧನೆ ಸಾಧ್ಯವಾಗುತ್ತಿದೆ ಎಂದರು. ಕೊಡವ ಕುಟಂಬಗಳ ಆಟಗಾರರು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಜಿಲ್ಲೆಯ ಹಾಕಿ ಕ್ರೀಡೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು.

ಒಲಂಪಿಯನ್, ಲೆಫ್ಟಿನೆಂಟ್ ಕರ್ತರ್ ಬಾಳೆಯಡ ಕೆ.ಸುಬ್ರಮಣಿ ಮಾತನಾಡಿ ಉತ್ತಮ ಕ್ರೀಡಾಕೂಟವನ್ನು ಆಯೋಜಿಸಿದ ಕುಂಡ್ಯೋಳಂಡ ಕುಟುಂಬಸ್ಥರು ಅಭಿನಂದನಾರ್ಹರು ಎಂದರು. ಒಲಿಂಪಿಯನ್ ಅಂಜಪರವಂಡ ಬಿ ಸುಬ್ಬಯ್ಯ ಮಾತನಾಡಿ ಕಾರ್ಯಕ್ರಮದ ಬಗ್ಗೆ ಉತ್ತಮ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಡಾ.ಕಲಿಯಾಟಂಡ ಚಿಣ್ಣಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇ.ಜ.ಬಾಚಮಂಡ ಎ.ಕಾರ್ಯಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಸಂಚಾಲಕ ದಿನೇಶ್ ಕಾರ್ಯಪ್ಪ ಸೇರಿದಂತೆ ಇತರ ಗಣ್ಯರು ಹಾಗೂ ಕ್ರೀಡಾ ಸಮಿತಿ ಪದಾಧಿಕಾರಿ ಸದಸ್ಯರು ಇನ್ನಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಕಾರ್ಯನಿರ್ವಹಿಸಿದ ಸಾಧಕರಿಗೆ ಹಾಗೂ ಇಲ್ಲಿ ನಡೆದ ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸಿದ ಅಂಪೈರ್‌ಗಳು, ತಾಂತ್ರಿಕವರ್ಗ ಮತ್ತು ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಬ್ಯಾಂಡ್ ಡಿಸ್ ಪ್ಲೇ ಕಾರ್ಯಕ್ರಮ

ಈ ಸಂದರ್ಭ ಇಲ್ಲಿಯ ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ಬ್ಯಾಂಡ್ ಡಿಸ್ ಪ್ಲೇ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದಕ್ಕೂ ಮುನ್ನ ಅತಿಥಿಗಳನ್ನು ದುಡಿಕೊಟ್ ಪಾಟ್ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕೊಡವ ಪುರುಷರಿಗೆ ದಪ್ಪ ಮೀಸೆಯ ಸ್ಪರ್ಧೆ ಮತ್ತು ಕೊಡವ ಮಹಿಳೆಯರಿಗೆ ಉದ್ದ ಜಡೆಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶನಿವಾರ ಬೆಳಿಗ್ಗೆ ಕಕ್ಕಬ್ಬೆ ಪಟ್ಟಣದಿಂದ ನಾಪೋಕ್ಲು ವರೆಗೆ ರಿಲೇ ಸ್ಪರ್ಧೆ ನಡೆಯಿತು.