ಸಾರಾಂಶ
ಗಯಾನ: ತನ್ನ ಮಾರಕ ಬೌಲಿಂಗ್ ಮೂಲಕ ಉಗಾಂಡವನ್ನು ಕೇವಲ 39 ರನ್‌ಗೆ ಕಟ್ಟಿಹಾಕಿದ 2 ಬಾರಿ ಚಾಂಪಿಯನ್ ವೆಸ್ಟ್‌ಇಂಡೀಸ್, 134 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ.
ಭಾನುವಾರದ ಪಂದ್ಯದ ಮೂಲಕ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ 2ನೇ ಜಯ ದಾಖಲಿಸಿದ ವಿಂಡೀಸ್ ‘ಸಿ’ ಗುಂಪಿನಲ್ಲಿ 4 ಅಂಕದೊಂದಿಗೆ 2ನೇ ಸ್ಥಾನಕ್ಕೇರಿದ್ದು, ಉಗಾಂಡ ಆಡಿರುವ 3 ಪಂದ್ಯಗಳಲ್ಲಿ 2ನೇ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ವಿಂಡೀಸ್ 5 ವಿಕೆಟ್‌ಗೆ 173 ರನ್ ಕಲೆಹಾಕಿತು. ಜಾನ್ಸನ್ ಚಾರ್ಲ್ಸ್ 44, ಆ್ಯಂಡ್ರೆ ರಸೆಲ್ 17 ಎಸೆತಗಳಲ್ಲಿ ಔಟಾಗದೆ 30 ರನ್ ಗಳಿಸಿದರು. ನಾಯಕ ರೋವ್ಮನ್ ಪೊವೆಲ್ 23, ಶೆರ್ಫಾನೆ ರುಥರ್‌ಫೋರ್ಡ್ 22, ನಿಕೋಲಸ್ ಪೂರನ್ 22 ರನ್ ಕೊಡುಗೆ ನೀಡಿದರು.
ಬೃಹತ್ ಗುರಿ ಬೆನ್ನತ್ತಿದ ಉಗಾಂಡಕ್ಕೆ ವಿಂಡೀಸ್ ಸ್ಪಿನ್ನರ್ ಅಕೇಲ್ ಹೊಸೈನ್ ಮಾರಕವಾಗಿ ಪರಿಣಮಿಸಿದರು. ಇನ್ನಿಂಗ್ಸ್‌ನ 2ನೇ ಎಸೆತದಲ್ಲೇ ವಿಕೆಟ್ ಭೇಟೆ ಆರಂಭಿಸಿದ ಅಕೇಲ್, ಮೊದಲ 7 ಬ್ಯಾಟರ್‌ಗಳ ಪೈಕಿ ಐವರನ್ನು ಪೆವಿಲಿಯನ್‌ಗೆ ಅಟ್ಟಿದರು. 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಜುಮಾ ಮಿಯಾಗಿ(13) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ತಂಡ 12 ಓವರ್‌ಗಳಲ್ಲಿ 39 ರನ್‌ಗೆ ಗಂಟುಮೂಟೆ ಕಟ್ಟಿತು. 4 ಓವರ್ ಎಸೆದ ಅಕೇಲ್ 11 ರನ್ ನೀಡಿ 5 ವಿಕೆಟ್ ಕಬಳಿಸಿದರು. ಸ್ಕೋರ್: ವೆಸ್ಟ್‌ಇಂಡೀಸ್ 20 ಓವರಲ್ಲಿ 173/5 (ಚಾರ್ಲ್ಸ್ 44, ರಸೆಲ್ 30*, ಮಸಾಬ 2-31), ಉಗಾಂಡ 12 ಓವರಲ್ಲಿ 39/10 (ಮಿಯಾಗಿ 13, ಅಕೇಲ್ 5-11, ಅಲ್ಜಾರಿ 2-6) ಪಂದ್ಯಶ್ರೇಷ್ಠ: ಅಕೇಲ್ ಹೊಸೈನ್.
ವಿಶ್ವಕಪ್‌ನಲ್ಲಿ ಜಂಟಿ ಅತಿ ಕನಿಷ್ಠ ಸ್ಕೋರ್
ಉಗಾಂಡ ಗಳಿಸಿದ 39 ರನ್ ಟಿ20 ವಿಶ್ವಕಪ್‌ನಲ್ಲಿ ಜಂಟಿ ಅತಿ ಕನಿಷ್ಠ ಸ್ಕೋರ್. 2014ರಲ್ಲಿ ಶ್ರೀಲಂಕಾ ವಿರುದ್ಧ ನೆದರ್‌ಲೆಂಡ್ಸ್ ಕೂಡಾ 39 ರನ್‌ಗೆ ಆಲೌಟಾಗಿತ್ತು.
2ನೇ ಅತಿ ದೊಡ್ಡ ಗೆಲುವು
ಪಂದ್ಯದಲ್ಲಿ ವಿಂಡೀಸ್ 134 ರನ್ ಗೆಲುವು ದಾಖಲಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ರನ್ ಅಂತರದ 2ನೇ ಅತಿ ದೊಡ್ಡ ಗೆಲುವು. 2007ರಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ 172 ರನ್ ಗೆಲುವು ಸಾಧಿಸಿದ್ದು ಈಗಲೂ ದಾಖಲೆಯಾಗಿಯೇ ಉಳಿದಿದೆ.