ಬಿಸಿಸಿಐನ ಕೊಟ್ಟ ₹125 ಕೋಟಿ ಹಣದಲ್ಲಿ ಭಾರತದ ಆಟಗಾರರಿಗೆ ಸಿಕ್ಕಿದ್ದೆಷ್ಟು ಗೊತ್ತಾ?

| Published : Jul 09 2024, 12:55 AM IST / Updated: Jul 09 2024, 04:33 AM IST

ಸಾರಾಂಶ

ಟೂರ್ನಿಯಲ್ಲಿ ಒಂದೂ ಪಂದ್ಯ ಆಡದಿರುವ ಸಂಜು ಸ್ಯಾಮ್ಸನ್‌, ಯಜುವೇಂದ್ರ ಚಹಲ್‌, ಯಶಸ್ವಿ ಜೈಸ್ವಾಲ್‌, ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ಗೆ ತಲಾ 5 ಕೋಟಿ ರು. ಸಿಗಲಿದೆ ಎನ್ನಲಾಗುತ್ತಿದೆ.

ನವದೆಹಲಿ: ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಬಹುಮಾನವಾಗಿ ನೀಡಿದ್ದ 125 ಕೋಟಿ ರು. ಹಣದಲ್ಲಿ ತಂಡದ ಎಲ್ಲಾ ಆಟಗಾರರಿಗೆ ₹5 ಕೋಟಿ ರು. ಸಿಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟೂರ್ನಿಯಲ್ಲಿ ಒಂದೂ ಪಂದ್ಯ ಆಡದಿರುವ ಸಂಜು ಸ್ಯಾಮ್ಸನ್‌, ಚಹಲ್‌, ಯಶಸ್ವಿ ಜೈಸ್ವಾಲ್‌, ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಕೂಡಾ ತಲಾ 5 ಕೋಟಿ ರು. ಸಿಗಲಿದೆ ಎನ್ನಲಾಗುತ್ತಿದೆ. 

ಇದೇ ವೇಳೆ ಮೀಸಲು ಆಟಗಾರರಾಗಿದ್ದ ರಿಂಕು ಸಿಂಗ್‌, ಶುಭ್‌ಮನ್‌ ಗಿಲ್‌, ಆವೇಶ್‌ ಖಾನ್‌, ಶುಭ್‌ಮನ್‌ ಗಿಲ್‌ಗೆ ತಲಾ ₹1 ಕೋಟಿ, ಸಹಾಯಕ ಕೋಚ್‌ಗಳಿಗೆ ತಲಾ ₹2.5 ಕೋಟಿ ಸಿಗಲಿದೆ. ಕರ್ನಾಟಕದ ರಘು ಸೇರಿ ಇಬ್ಬರು ಥ್ರೋಡೌನ್‌ ತಜ್ಞರು, 3 ಫಿಸಿಯೋ ಥೆರಪಿಸ್ಟ್‌ಗಳು ತಲಾ ₹2 ಕೋಟಿ, ಅಜಿತ್‌ ಅಗರ್ಕರ್‌ ಸೇರಿದಂತೆ ಆಯ್ಕೆ ಸಮಿತಿ ಅಧಿಕಾರಿಗಳು ತಲಾ ₹1 ಕೋಟಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. 

ತಂಡದ ಜೊತೆ ತೆರಳಿದ್ದ ಮಾಧ್ಯಮ, ತಾಂತ್ರಿಕ ಅಧಿಕಾರಿಗಳಿಗೂ ಪಾಲು ಸಿಗಲಿದೆ ಎಂದು ಗೊತ್ತಾಗಿದೆ.ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ರೋಚಕವಾಗಿ ಗೆದ್ದ ಭಾರತ 17 ವರ್ಷಗಳ ಬಳಿಕ ವಿಶ್ವಕಪ್‌ ಎತ್ತಿಹಿಡಿದಿತ್ತು. ಈ ಕಾರಣಕ್ಕೆ ಬಿಸಿಸಿಐ ಭಾರತ ತಂಡಕ್ಕೆ ಬರೋಬ್ಬರಿ ₹125 ಕೋಟಿ ನೀಡುವುದಾಗಿ ಘೋಷಿಸಿತ್ತು. ಇತ್ತೀಚೆಗೆ ವಾಂಖೇಡೆ ಕ್ರೀಡಾಂಗಣದಲ್ಲಿ ಬಿಸಿಸಿಐ ಅಧಿಕಾರಿಗಳು 125 ಕೋಟಿ ರು. ಚೆಕ್‌ ಆಟಗಾರರಿಗೆ ಹಸ್ತಾಂತರಿಸಿದ್ದರು.