ಸಾರಾಂಶ
‘ನನ್ನ ಆತ್ಮಗೌರವಕ್ಕೆ ದಕ್ಕೆಯಾಗಿದೆ. ಆದ್ದರಿಂದ ಆಂಧ್ರ ತಂಡದಲ್ಲಿ ನಾನು ಎಂದಿಗೂ ಆಡುವುದಿಲ್ಲ’ ಎಂದು ಹಿರಿಯ ಕ್ರಿಕೆಟಿಗ ಹನುಮ ವಿಹಾರಿ ಹೇಳಿದ್ದಾರೆ.
ಬೆಂಗಳೂರು: ‘ನನ್ನ ಆತ್ಮಗೌರವಕ್ಕೆ ದಕ್ಕೆಯಾಗಿದೆ. ಆದ್ದರಿಂದ ಆಂಧ್ರ ತಂಡದಲ್ಲಿ ನಾನು ಎಂದಿಗೂ ಆಡುವುದಿಲ್ಲ’ ಎಂದು ಹಿರಿಯ ಕ್ರಿಕೆಟಿಗ ಹನುಮ ವಿಹಾರಿ ಹೇಳಿದ್ದಾರೆ.
ಈ ಬಗ್ಗೆ ಸೋಮವಾರ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ರಾಜಕಾರಣಿಯಿಂದಾಗಿ ನಾನು ನಾಯಕತ್ವ ಕಳೆದುಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ.
ಪ್ರಸಕ್ತ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಬೆಂಗಾಲ್ ವಿರುದ್ಧ ಪಂದ್ಯದ ನಂತರ ಹನುಮ ವಿಹಾರಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ರಿಕ್ಕಿ ಭುಯಿ ನಾಯಕನಾಗಿ ನೇಮಕಗೊಂಡಿದ್ದರು.
ಈ ಬಗ್ಗೆ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ವಿಹಾರಿ, ‘ಬೆಂಗಾಲ್ ವಿರುದ್ಧ ಪಂದ್ಯಕ್ಕೆ ನಾನು ನಾಯಕನಾಗಿದ್ದೆ. ಪಂದ್ಯದ ವೇಳೆ ತಂಡದ 17ನೇ ಆಟಗಾರ(ಕೆ.ಎನ್.ಪೃಥ್ವಿ ರಾಜ್)ನ ಮೇಲೆ ಕೂಗಾಡಿದ್ದೆ.
ಆತನ ತಂದೆ ರಾಜಕಾರಣಿಯಾಗಿದ್ದು, ಅವರಿಗೆ ದೂರು ಹೋಗಿದೆ. ಬಳಿಕ ರಾಜಕಾರಣಿ ಆಂಧ್ರ ಕ್ರಿಕೆಟ್ ಸಂಸ್ಥೆಗೆ ನನ್ನ ರಾಜೀನಾಮೆ ಪಡೆಯುವಂತೆ ಹೇಳಿದ್ದರಿಂದ ನನ್ನ ಮೇಲೆ ಕ್ರಮ ಕೈಗೊಳ್ಳಲಾಯಿತು’ ಎಂದಿದ್ದಾರೆ.
‘ಗಾಯಗೊಂಡರೂ ಆಟ ಬಿಡದ ನನಗಿಂತ ಯಾವುದೇ ಆಟಗಾರ ಮುಖ್ಯ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆ ಭಾವಿಸಿದೆ. ಕಳೆದ 7 ವರ್ಷದಲ್ಲಿ ಆಂಧ್ರವನ್ನು 5 ಬಾರಿ ನಾಕೌಟ್‌ಗೆ ಕೊಂಡೊಯ್ದಿದ್ದೇನೆ.
ಭಾರತಕ್ಕಾಗಿ 16 ಟೆಸ್ಟ್ ಆಡಿದ್ದೇನೆ. ನಾನು ತಂಡವನ್ನು ಗೌರವಿಸುವ ಏಕೈಕ ಕಾರಣದಿಂದಾಗಿ ಮುಜುಗರಕ್ಕೊಳಗಾದರೂ ಈ ಋತುವಿನಲ್ಲಿ ಆಡುವುದನ್ನು ಮುಂದುವರಿಸಿದೆ’ ಎಂದು ಹೇಳಿದ್ದಾರೆ.
ವಿಹಾರಿ ಆರೋಪಗಳನ್ನು ಪೃಥ್ವಿ ರಾಜ್ ಅಲ್ಲಗಳೆದಿದ್ದು, ತಂಡದಲ್ಲಿ ಏನು ನಡೆದಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಬಳಿಕ ವಿಹಾರಿ ತಮ್ಮನ್ನು ಬೆಂಬಲಿಸಿ ಆಂಧ್ರ ಕ್ರಿಕೆಟ್ ಸಂಸ್ಥೆಗೆ ಇತರ ಆಟಗಾರರು ಬರೆದ ಪತ್ರವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.