ಪಿಒಕೆ ಬಿಟ್ಟು ಇತರೆಡೆ ಚಾಂಪಿಯನ್ಸ್‌ ಟ್ರೋಫಿ ಟೂರ್‌. 2025ರ ಜ.15ರಿಂದ 26ರ ವರೆಗೆ ಭಾರತದ ವಿವಿಧ ನಗರಗಳಲ್ಲಿ ಟ್ರೋಫಿ ಟೂರ್‌ ನಡೆಯಲಿದೆ.

ಇಸ್ಲಾಮಾಬಾದ್‌: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಒತ್ತಡಕ್ಕೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಮಣಿದಿದ್ದು, ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ನಗರಗಳಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ‘ಟ್ರೋಫಿ ಟೂರ್‌’ ನಡೆಸದಿರಲು ನಿರ್ಧರಿಸಿದೆ.

ನ.16ರಂದು ಇಸ್ಲಾಮಾಬಾದ್‌, ಸ್ಕರ್ದು, ಮರೀ, ಹನ್‌ಜಾ ಹಾಗೂ ಮುಜಫ್ಪರಾಬಾದ್‌ನಲ್ಲಿ ಟ್ರೋಫಿ ಟೂರ್‌ ನಡೆಯಲಿದೆ ಎಂದು ಗುರುವಾರ ಪಿಸಿಬಿ ಘೋಷಿಸಿತ್ತು. ಆದರೆ ಸ್ಕರ್ದು, ಹನ್‌ಜಾ, ಮುಜಫ್ಪರಾಬಾದ್‌ ಪ್ರದೇಶ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಕಾರಣ, ಅಲ್ಲಿ ಟ್ರೋಫಿ ಟೂರ್‌ ನಡೆಸುವುದಕ್ಕೆ ಬಿಸಿಸಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 

ಹೀಗಾಗಿ ಟ್ರೋಫಿ ಟೂರ್‌ ವೇಳಾಪಟ್ಟಿಯನ್ನು ಪಿಸಿಬಿ ಬದಲಿಸಿದ್ದು, ನ.17ರಿಂದ 25ರ ವರೆಗೆ ಇಸ್ಲಾಮಾಬಾದ್‌, ಅಬೋಟಾಬಾದ್‌, ಟೆಕ್ಸಿಲಾ, ಕಾನ್ಪುರ ಸೇರಿ ಕೆಲ ನಗರಗಳಿಗೆ ಟ್ರೋಫಿ ಸಂಚರಿಸಲಿದೆ ಎಂದು ತಿಳಿಸಿದೆ. 2025ರ ಜ.15ರಿಂದ 26ರ ವರೆಗೆ ಭಾರತದ ವಿವಿಧ ನಗರಗಳಲ್ಲಿ ಟ್ರೋಫಿ ಟೂರ್‌ ನಡೆಯಲಿದೆ.