ಸಾರಾಂಶ
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ‘ಟ್ರೋಫಿ ಟೂರ್’ ನಡೆಸುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ತಡೆ ನೀಡಿದೆ. ನ.16ರಂದು ಇಸ್ಲಾಮಾಬಾದ್, ಸ್ಕರ್ದು, ಮರೀ, ಹನ್‌ಜಾ ಹಾಗೂ ಮುಜಫ್ಪರಾಬಾದ್‌ನಲ್ಲಿ ಟ್ರೋಫಿ ಟೂರ್ ನಡೆಯಲಿದೆ ಎಂದು ಗುರುವಾರ ಪಿಸಿಬಿ ಘೋಷಿಸಿತ್ತು. ಆದರೆ ಸ್ಕರ್ದು, ಮರೀ, ಹನ್‌ಜಾ ಪ್ರದೇಶ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಕಾರಣ, ಅಲ್ಲಿ ಟ್ರೋಫಿ ಟೂರ್ ನಡೆಸುವುದಕ್ಕೆ ಬಿಸಿಸಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಟ್ರೋಫಿ ಟೂರ್ ನಡೆಸದಂತೆ ಪಿಸಿಬಿಗೆ ಐಸಿಸಿ ತಡೆ ನೀಡಿದೆ.
ಪಾಕ್‌ಗೆ ಕಬಡ್ಡಿ ತಂಡವನ್ನು ಕಳುಹಿಸಲ್ಲ ಎಂದ ಭಾರತ
ನವದೆಹಲಿ: ಕ್ರಿಕೆಟ್ ಬಳಿಕ ತನ್ನ ಕಬಡ್ಡಿ ತಂಡವನ್ನು ಸಹ ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ನಿರಾಕರಿಸಿದೆ. ಪಾಕಿಸ್ತಾನದಲ್ಲಿ ಸ್ನೇಹಾರ್ಥ ಕಬಡ್ಡಿ ಪಂದ್ಯಗಳನ್ನು ಆಡುವಂತೆ ಭಾರತಕ್ಕೆ ಪಾಕ್ ಕಬಡ್ಡಿ ಫೆಡರೇಶನ್ ಆಹ್ವಾನ ನೀಡಿತ್ತು. ಆದರೆ ಭದ್ರತಾ ದೃಷ್ಟಿಯಿಂದ ಪಾಕ್‌ನ ಆಹ್ವಾನವನ್ನು ಭಾರತೀಯ ಕಬಡ್ಡಿ ಫೆಡರೇಶನ್ ನಿರಾಕರಿಸಿದ್ದು, ತಂಡ ಕಳುಹಿಸಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತದ ನಿರ್ಧಾರಕ್ಕೆ ಪಾಕಿಸ್ತಾನ ಕಬಡ್ಡಿ ಫೆಡರೇಶನ್ ಅಸಮಾಧಾನ ವ್ಯಕ್ತಪಡಿಸಿದೆ.
ಇನ್ನು, ನವೆಂಬರ್ ಅಂತ್ಯಕ್ಕೆ ಪಾಕ್‌ನಲ್ಲಿ ನಡೆಯಲಿರುವ ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.