ಸಾರಾಂಶ
15 ಸದಸ್ಯರ ತಂಡಕ್ಕೆ ರೋಹಿತ್ ನಾಯಕ, ಪಾಂಡ್ಯ ಉಪನಾಯಕ. ಪಂತ್, ಸಂಜು ಸ್ಯಾಮ್ಸನ್ ಇಬ್ಬರಿಗೂ ಸ್ಥಾನ. ಕನ್ನಡಿಗ ಕೆ.ಎಲ್.ರಾಹುಲ್‌ಗಿಲ್ಲ ಚಾನ್ಸ್, ರಿಂಕು ಸಿಂಗ್‌ರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದ ಬಿಸಿಸಿಐ. ಸ್ಫೋಟಕ ಬ್ಯಾಟರ್ ಶಿವಂ ದುಬೆಗೆ ಒಲಿದ ಅದೃಷ್ಟ
ಅಹಮದಾಬಾದ್: ಐಪಿಎಲ್ ಜಿದ್ದಾಜಿದ್ದಿ ನಡುವೆಯೇ ಮುಂಬರುವ ಜೂ.1ರಿಂದ ವೆಸ್ಟ್‌ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸಿದ್ಧಗೊಂಡಿದೆ. ಮಂಗಳವಾರ ಇಲ್ಲಿ ಸಭೆ ನಡೆಸಿದ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ತಂಡವನ್ನು ಪ್ರಕಟಿಸಿತು.
ನಿರೀಕ್ಷೆಯಂತೆ ರಿಷಭ್ ಪಂತ್, ಶಿವಂ ದುಬೆ, ಸಂಜು ಸ್ಯಾಮ್ಸನ್ ಮೂವರೂ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದು, ಕರ್ನಾಟಕದ ಕೆ.ಎಲ್.ರಾಹುಲ್‌ರನ್ನು ಆಯ್ಕೆಗೆ ಪರಿಗಣಿಸಿಲ್ಲ. ತಂಡದಲ್ಲಿ ನಾಲ್ವರು ತಜ್ಞ ಬ್ಯಾಟರ್ಸ್, ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ಸ್, ಇಬ್ಬರು ವೇಗದ ಬೌಲಿಂಗ್ ಆಲ್ರೌಂಡರ್ಸ್, ಇಬ್ಬರು ಸ್ಪಿನ್ ಬೌಲಿಂಗ್ ಆಲ್ರೌಂಡರ್ಸ್, ಇಬ್ಬರು ತಜ್ಞ ಸ್ಪಿನ್ನರ್ಸ್, ಮೂವರು ತಜ್ಞ ವೇಗಿಗಳಿಗೆ ಸ್ಥಾನ ನೀಡಲಾಗಿದೆ. ನಾಲ್ವರು ಆಟಗಾರರನ್ನು ಮೀಸಲು ಪಡೆಯಲ್ಲಿ ಇರಿಸಲಾಗಿದೆ.ಮೊದಲ ಬಾರಿಗೆ ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಕುಲ್ದೀಪ್ ಯಾದವ್, ಮೊಹಮದ್ ಸಿರಾಜ್, ಶಿವಂ ದುಬೆ ಸ್ಥಾನ ಪಡೆದಿದ್ದಾರೆ.ಭಾರತ ತನ್ನ ಮೊದಲ ಪಂದ್ಯವನ್ನು ಜೂ.5ರಂದು ಐರ್ಲೆಂಡ್ ವಿರುದ್ಧ ಆಡಲಿದ್ದು, ಜೂ.9ರಂದು ನ್ಯೂಯಾರ್ಕ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಜೂ.12ರಂದು ಅಮೆರಿಕ, ಜೂ.15ರಂದು ಕೆನಡಾ ವಿರುದ್ಧ ಸೆಣಸಲಿದೆ.2024ರ ಟಿ20 ವಿಶ್ವಕಪ್‌ಗೆ ಭಾರತ ತಂಡರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಅರ್ಶ್‌ದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್.
ಮೀಸಲು ಆಟಗಾರರು: ಶುಭ್‌ಮನ್ ಗಿಲ್, ರಿಂಕು ಸಿಂಗ್, ಆವೇಶ್ ಖಾನ್, ಖಲೀಲ್ ಅಹ್ಮದ್.