ವಿಂಬಲ್ಡನ್‌ನಿಂದ ವಿಶ್ವ ನಂ.1 ಇಗಾ ಔಟ್‌: ಸಿನ್ನರ್‌, ಗಾಫ್‌, ಎಮ್ಮಾ ಪ್ರಿ ಕ್ವಾರ್ಟರ್‌ಗೆ

| Published : Jul 07 2024, 01:29 AM IST / Updated: Jul 07 2024, 04:53 AM IST

ವಿಂಬಲ್ಡನ್‌ನಿಂದ ವಿಶ್ವ ನಂ.1 ಇಗಾ ಔಟ್‌: ಸಿನ್ನರ್‌, ಗಾಫ್‌, ಎಮ್ಮಾ ಪ್ರಿ ಕ್ವಾರ್ಟರ್‌ಗೆ
Share this Article
  • FB
  • TW
  • Linkdin
  • Email

ಸಾರಾಂಶ

5 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ, ವಿಶ್ವ ನಂ.1 ಇಗಾ ಸ್ವಿಯಾಟೆಕ್‌ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ. ಇಟಲಿಯ ಜಾಸ್ಮಿನ್‌ ಪೌಲಿನಿ 4ನೇ ಸುತ್ತು ಪ್ರವೇಶಿಸಿದರು.

ಲಂಡನ್‌: ಟೆನಿಸ್‌ ಲೋಕದ ಮುಂದಿನ ಸೂಪರ್‌ಸ್ಟಾರ್‌ಗಳು ಎಂದೇ ಕರೆಸಿಕೊಳ್ಳುವ ವಿಶ್ವ ನಂ.1 ಯಾನಿಕ್‌ ಸಿನ್ನರ್‌, ವಿಶ್ವ ನಂ.2 ಕೊಕೊ ಗಾಫ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 

2021ರ ಯುಎಸ್ ಓಪನ್‌ ಚಾಂಪಿಯನ್‌ ಎಮ್ಮಾ ರಾಡುಕಾನು ಕೂಡಾ 4ನೇ ಸುತ್ತಿಗೆ ತಲುಪಿದ್ದಾರೆ. ಆದರೆ 5 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ, ವಿಶ್ವ ನಂ.1 ಇಗಾ ಸ್ವಿಯಾಟೆಕ್‌ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ 3ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಸಿನ್ನರ್‌ಗೆ ಶ್ರೇಯಾಂಕ ರಹಿತ, ಸರ್ಬಿಯಾದ ಮಿಯೋಮಿರ್‌ ವಿರುದ್ಧ 6-1, 6-4, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಲಭಿಸಿತು. 10ನೇ ಶ್ರೇಯಾಂಕಿತ, ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೊವ್‌ ಕೂಡಾ ಪ್ರಿ ಕ್ವಾರ್ಟರ್‌ಗೇರಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಗಾಫ್‌, ಬ್ರಿಟನ್‌ನ ಸೋನಯ್‌ ಕಾರ್ಟಲ್‌ ವಿರುದ್ಧ 6-4, 6-0 ಸೆಟ್‌ಗಳಲ್ಲಿ ಗೆದ್ದರೆ, ಬ್ರಿಟನ್‌ನ 21 ವರ್ಷದ ರಾಡುಕಾನು 9ನೇ ಶ್ರೇಯಾಂಕಿತ, ಗ್ರೀಕ್‌ನ ಮರಿಯಾ ಸಕ್ಕಾರಿ ವಿರುದ್ಧ 6-2, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಈ ವರ್ಷದ ಫ್ರೆಂಚ್‌ ಓಪನ್ ರನ್ನರ್‌-ಅಪ್‌, ಇಟಲಿಯ ಜಾಸ್ಮಿನ್‌ ಪೌಲಿನಿ ಕೂಡಾ 4ನೇ ಸುತ್ತು ಪ್ರವೇಶಿಸಿದರು.

246.2 ಕಿ.ಮೀ. ವೇಗದ ಸರ್ವ್‌: 21 ವರ್ಷದ ಶೆಲ್ಟನ್‌ ದಾಖಲೆ

ಅಮೆರಿಕದ 21 ವರ್ಷದ ಬೆನ್‌ ಶೆಲ್ಟನ್‌ 246.2 ಕಿ.ಮೀ. ವೇಗದ ಸರ್ವ್‌ ಮಾಡಿದ್ದು, ವಿಂಬಲ್ಡನ್‌ ಇತಿಹಾಸದಲ್ಲೇ ಅತಿ ವೇಗದ ಸರ್ವ್‌ ಎನಿಸಿಕೊಂಡಿದೆ. ದಕ್ಷಿಣ ಆಫ್ರಿಕಾದ ಲಾಯ್ಡ್‌ ಹ್ಯಾರಿಸ್‌ ವಿರುದ್ಧ 2ನೇ ಸುತ್ತಿನ ಪಂದ್ಯದ 4ನೇ ಸೆಟ್‌ನಲ್ಲಿ ಅವರು ಈ ಸಾಧನೆ ಮಾಡಿದರು. 2010ರಲ್ಲಿ ಅಮೆರಿಕದ ಟೇಲರ್‌ ಡೆಂಟ್‌ 238.183 ಕಿ.ಮೀ. ವೇಗದಲ್ಲಿ ಸರ್ವ್ ಮಾಡಿದ್ದು ಈ ವರೆಗೆ ವಿಂಬಲ್ಡನ್‌ನಲ್ಲಿ ದಾಖಲೆಯಾಗಿತ್ತು. ಶೆಲ್ಟನ್‌ ಸರ್ವ್‌ ಟೆನಿಸ್‌ನಲ್ಲಿ 9ನೇ ಅತಿ ವೇಗದ ಸರ್ವ್‌ ಎನಿಸಿಕೊಂಡಿದೆ.