ಚೆಪಾಕ್‌ನಲ್ಲಿಂದು ಸಿಎಸ್‌ಕೆಗೆ ಸನ್‌ರೈಸರ್ಸ್‌ ಸವಾಲು

| Published : Apr 28 2024, 01:18 AM IST / Updated: Apr 28 2024, 04:13 AM IST

ಸಾರಾಂಶ

ಹ್ಯಾಟ್ರಿಕ್‌ ಸೋಲು ತಪ್ಪಿಸಬೇಕಾದ ಒತ್ತಡದಲ್ಲಿ ಚೆನ್ನೈ ಕಿಂಗ್ಸ್‌. ಚೆನ್ನೈ ಆಡಿರುವ 8ರಲ್ಲಿ 4 ಗೆದ್ದಿದ್ದರೆ, ಸನ್‌ರೈಸರ್ಸ್‌ 8ರಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.

ಚೆನ್ನೈ: ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಈ ಬಾರಿ ಐಪಿಎಲ್‌ಗೆ ಕಾಲಿರಿಸಿದ್ದರೂ ಅಸ್ಥಿರ ಆಟದಿಂದಾಗಿ ಆತ್ಮವಿಶ್ವಾಸ ಕಳೆದುಕೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಭಾನುವಾರ ಸನ್‌ರೈಸರ್ಸ್‌ ಹೈದ್ರಾಬಾದ್‌ ಸವಾಲು ಎದುರಾಗಲಿದೆ. ಚೆನ್ನೈ ತಂಡ ಸತತ 2 ಸೋಲಿನ ಸರಪಳಿಯನ್ನು ತವರಿನಲ್ಲಿ ಕಳಚುವ ವಿಶ್ವಾಸದಲ್ಲಿದ್ದರೆ, ಹೈದ್ರಾಬಾದ್‌ ಮತ್ತೆ ಗೆಲುವಿನ ಹಳಿಗೆ ಮರಳುವ ಕಾತರದಲ್ಲಿದೆ. 

ಚೆನ್ನೈ ಆಡಿರುವ 8ರಲ್ಲಿ 4 ಗೆದ್ದಿದ್ದರೆ, ಸನ್‌ರೈಸರ್ಸ್‌ 8ರಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ತನ್ನದೇ ತವರಲ್ಲಿ ಲಖನೌ ತಂಡ 210 ರನ್‌ ಗುರಿ ಬೆನ್ನತ್ತಿರುವುದು ಚೆನ್ನೈನ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದೆ. ಋತುರಾಜ್‌ ಗಾಯಕ್ವಾಡ್‌, ಶಿವಂ ದುಬೆ ಅಬ್ಬರಿಸುತ್ತಿದ್ದರೂ ಇತರರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ಬೌಲರ್‌ಗಳೂ ಮೊನಚು ಕಳೆದುಕೊಂಡಿದ್ದು, ಸ್ಫೋಟಕ ಆಟವಾಡುತ್ತಿರುವ ಸನ್‌ರೈಸರ್ಸ್‌ ಬ್ಯಾಟರ್‌ಗಳಿಂದ ಕಠಿಣ ಸವಾಲು ಎದುರಾಗಬಹುದು.

ಅತ್ತ ಸನ್‌ರೈಸರ್ಸ್‌ ತನ್ನ ಬ್ಯಾಟಿಂಗ್‌ ಮೂಲಕವೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ. ಆದರೆ ಮೊದಲು ಬ್ಯಾಟ್‌ ಮಾಡಿದಾಗ ಬೃಹತ್‌ ಮೊತ್ತ ಕಲೆಹಾಕುವ ತಂಡ, ದೊಡ್ಡ ಮೊತ್ತವನ್ನು ಬೆನ್ನತ್ತಲಾಗದೆ ಸೋಲುವುದು ತಂಡದ ಮೈನಸ್‌ ಪಾಯಿಂಟ್‌. ಆದರೆ ಮೊದಲ ಮುಖಾಮುಖಿಯಲ್ಲಿ ಚೆನ್ನೈಯನ್ನು ಮಣಿಸಿದ್ದ ಕಮಿನ್ಸ್‌ ಪಡೆ ಮತ್ತೊಮ್ಮೆ ಹಾಲಿ ಚಾಂಪಿಯನ್ನರನ್ನು ಮಣಿಸುವ ಕಾತರದಲ್ಲಿದೆ.

ಒಟ್ಟು ಮುಖಾಮುಖಿ: 20

ಚೆನ್ನೈ: 14

ಹೈದ್ರಾಬಾದ್: 06

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋತುರಾಜ್‌(ನಾಯಕ), ರಹಾನೆ, ಡ್ಯಾರಿಲ್‌, ಜಡೇಜಾ, ದುಬೆ, ಧೋನಿ, ದೀಪಕ್‌, ಶಾರ್ದೂಲ್‌, ತುಷಾರ್‌, ಪತಿರನ, ಮುಸ್ತಾಫಿಜುರ್‌ಹೈದ್ರಾಬಾದ್: ಹೆಡ್‌, ಅಭಿಷೇಕ್‌, ಮಾರ್ಕ್‌ರಮ್‌, ಕ್ಲಾಸೆನ್‌, ನಿತೀಶ್‌, ಸಮದ್‌, ಶಾಬಾಜ್‌, ಕಮಿನ್ಸ್‌(ನಾಯಕ), ಭುವನೇಶ್ವರ್‌, ಮಾರ್ಕಂಡೆ, ಉನಾದ್ಕಟ್‌.

ಪಂದ್ಯ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.