ಲಾರ್ಡ್ಸ್‌ನಲ್ಲಿ ಲೀಡ್‌ಗೆ ಭಾರತ-ಇಂಗ್ಲೆಂಡ್‌ ಪೈಪೋಟಿ

| N/A | Published : Jul 11 2025, 11:48 PM IST / Updated: Jul 12 2025, 09:34 AM IST

ಸಾರಾಂಶ

ಮೊದಲೆರಡು ಟೆಸ್ಟ್‌ಗಳಂತೆ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್‌ ಸಹ ರೋಚಕವಾಗಿ ಸಾಗುತ್ತಿದೆ. ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ ಜಾದೂ ಹೊರತಾಗಿಯೂ ಭಾರತದ ಕಳಪೆ ಫೀಲ್ಡಿಂಗ್‌ನಿಂದಾಗಿ ಇಂಗ್ಲೆಂಡ್‌ 387 ರನ್‌ ಗಳಿಸಿತು.

 ಲಂಡನ್‌: ಮೊದಲೆರಡು ಟೆಸ್ಟ್‌ಗಳಂತೆ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್‌ ಸಹ ರೋಚಕವಾಗಿ ಸಾಗುತ್ತಿದೆ. ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ ಜಾದೂ ಹೊರತಾಗಿಯೂ ಭಾರತದ ಕಳಪೆ ಫೀಲ್ಡಿಂಗ್‌ನಿಂದಾಗಿ ಇಂಗ್ಲೆಂಡ್‌ 387 ರನ್‌ ಗಳಿಸಿತು.

ಮೊದಲ ದಿನ 4 ವಿಕೆಟ್‌ಗೆ 251 ರನ್‌ ಗಳಿಸಿದ್ದ ಇಂಗ್ಲೆಂಡ್‌, ದಿನದಾಟದ ಆರಂಭದಲ್ಲೇ ದಿಢೀರ್‌ ಕುಸಿತ ಕಂಡಿತು. 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ನಾಯಕ ಬೆನ್‌ ಸ್ಟೋಕ್ಸ್‌ (44) ಬೂಮ್ರಾ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. 99 ರನ್‌ ಗಳಿಸಿ ಔಟಾಗದೆ ಉಳಿದಿದ್ದ ಜೋ ರೂಟ್‌ ಶತಕ ಪೂರೈಸುತ್ತಿದ್ದಂತೆ ವಿಕೆಟ್‌ ಕಳೆದುಕೊಂಡರು. ಕ್ರಿಸ್‌ ವೋಕ್ಸ್‌ ಸಹ ಬೇಗನೆ ಪೆವಿಲಿಯನ್‌ ದಾರಿ ಹಿಡಿದರು. ಕೇವಲ 20 ರನ್‌ಗೆ 3 ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ 300 ರನ್‌ಗಳೊಳಗೆ ಆಲೌಟ್‌ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಭಾರತೀಯರ ಕಳಪೆ ಫೀಲ್ಡಿಂಗ್‌ ಇಂಗ್ಲೆಂಡ್‌ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಯಿತು.

ಜೇಮಿ ಸ್ಮಿತ್‌ 4 ರನ್ ಗಳಿಸಿದ್ದಾಗ ಕೆ.ಎಲ್‌.ರಾಹುಲ್‌ ಸುಲಭ ಕ್ಯಾಚ್‌ ಕೈಚೆಲ್ಲಿ ಜೀವದಾನ ನೀಡಿದರು. ಇದರ ಲಾಭವೆತ್ತಿದ ಸ್ಮಿತ್‌ 51 ರನ್‌ ಗಳಿಸಿದರು. ಇನ್ನು, ಬ್ರೈಡನ್‌ ಕಾರ್ಸ್‌ಗೆ 2 ಬಾರಿ ಜೀವದಾನ ದೊರೆಯಿತು. ಅವರು 56 ರನ್‌ ಗಳಿಸಿದಲ್ಲದೇ, ಸ್ಮಿತ್‌ ಜೊತೆ 8ನೇ ವಿಕೆಟ್‌ಗೆ 86 ರನ್‌ ಜೊತೆಯಾಟದಲ್ಲಿ ಭಾಗಿಯಾದರು. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ 387 ರನ್‌ಗೆ ಕೊನೆಗೊಂಡಿತು. ಕೊನೆ 3 ವಿಕೆಟ್‌ಗೆ ಆತಿಥೇಯ ತಂಡ 116 ರನ್‌ ಸೇರಿಸಿತು. ಬೂಮ್ರಾ 5 ವಿಕೆಟ್‌ ಕಬಳಿಸಿದರು.

ಮೊದಲ ಓವರಲ್ಲೇ 3 ಬೌಂಡರಿಗಳೊಂದಿಗೆ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತಕ್ಕೆ, ಆರ್ಚರ್‌ ಆಘಾತ ನೀಡಿದರು. ಜೈಸ್ವಾಲ್‌ (13) ರನ್‌ಗೆ ಔಟಾದರು. 2ನೇ ವಿಕೆಟ್‌ಗೆ ರಾಹುಲ್‌ ಹಾಗೂ ಕರುಣ್‌ ನಾಯರ್‌ (40) ನಡುವೆ 61 ರನ್‌ ಜೊತೆಯಾಟ ಮೂಡಿಬಂತು. ಉತ್ತಮ ಆರಂಭ ಪಡೆದರೂ ದೊಡ್ಡ ಸ್ಕೋರ್‌ ಗಳಿಸಲು ಕರುಣ್‌ ಮತ್ತೆ ಫೇಲಾದರು.

ಉತ್ಕೃಷ್ಟ ಲಯದಲ್ಲಿರುವ ಗಿಲ್‌ ಕೇವಲ 16 ರನ್‌ಗೆ ಔಟಾಗಿದ್ದು ಇಂಗ್ಲೆಂಡ್‌ನ ಆತ್ಮವಿಶ್ವಾಸ ಹೆಚ್ಚಿಸಿತು. ರಾಹುಲ್‌ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರೆ, ಕೈಬೆರಳಿನ ಗಾಯದ ನಡುವೆಯೂ ಪಂತ್‌ ಬ್ಯಾಟಿಂಗ್‌ಗಿಳಿದು ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು.

Read more Articles on