ಸಾರಾಂಶ
ಬೆಂಗಳೂರು: ಅ.16ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರ ಅಭ್ಯಾಸ ಆರಂಭಿಸಿದ್ದಾರೆ. ತಾರಾ ಆಟಗಾರರಾದ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಕಾಣಿಸಿಕೊಂಡರು.
ಈ ವೇಳೆ ಅವರ ಜೊತೆ ಭಾರತದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಕೂಡಾ ಕಾಣಿಸಿಕೊಂಡರು. ಅಭ್ಯಾಸದ ವೇಳೆ ದ್ರಾವಿಡ್ ಅಟಗಾರರ ಜೊತೆ ಮಾತುಕತೆ ನಡೆಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಇನ್ನು, ನ್ಯೂಜಿಲೆಂಡ್ ಆಟಗಾರರು ಈಗಾಗಲೇ ನಗರಕ್ಕೆ ಆಗಮಿಸಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಬೆಂಗಳೂರು ಟೆಸ್ಟ್ ಬಳಿಕ ಉಭಯ ತಂಡಗಳು ಅ.24ರಿಂದ ಪುಣೆ, ನ.1ರಿಂದ ಮುಂಬೈನಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಿವೆ.
ಪರ್ತ್: ಭಾರತ vs ಭಾರತ ಎ ನ.15ರಿಂದ ಅಭ್ಯಾಸ ಪಂದ್ಯ
ನವದೆಹಲಿ: ನ.22ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೂ ಭಾರತ ತಂಡ ಭಾರತ ‘ಎ’ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಪಂದ್ಯ ನ.15ರಿಂದ 17ರ ವರೆಗೆ ಪರ್ತ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಭಾರತ ‘ಎ’ ತಂಡ ಇದೇ ತಿಂಗಳ ಕೊನೆ ವಾರದಲ್ಲೇ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ.ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸುವ ಸಾಧ್ಯತೆಯಿದ್ದು, ಆಸ್ಟ್ರೇಲಿಯಾ ‘ಎ’ ವಿರುದ್ಧ 2 ಪಂದ್ಯಗಳನ್ನಾಡಲಿದೆ. ಮೊದಲ ಪಂದ್ಯ ಅ.31ರಿಂದ ನ.3ರ ವರೆಗೆ ಹಾಗೂ 2ನೇ ಪಂದ್ಯ ನ.7ರಿಂದ 10ರ ವರೆಗೆ ನಡೆಯಲಿವೆ. ಭಾರತ ‘ಎ’ ತಂಡ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ನವೆಂಬರ್ 2ನೇ ವಾರ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ.