ಟಿ20 ವಿಶ್ವಕಪ್‌: ಆಫ್ಘನ್‌ಗೆ ಬೆಂಡೆತ್ತಿದ ಭಾರತಕ್ಕೆ ಸೂಪರ್‌ ಜಯ!

| Published : Jun 21 2024, 01:01 AM IST / Updated: Jun 21 2024, 04:45 AM IST

ಸಾರಾಂಶ

ಟಿ20 ವಿಶ್ವಕಪ್‌ ಸೂಪರ್-8: ಭಾರತಕ್ಕೆ 47 ರನ್‌ ಸುಲಭ ಜಯ. ಅಗ್ರ ಕ್ರಮಾಂಕ ವಿಫಲವಾದ್ರೂ ಭಾರತ 8 ವಿಕೆಟ್‌ಗೆ 181. ಸೂರ್ಯ ಫಿಫ್ಟಿ. ಬೂಮ್ರಾ ಅಮೋಘ ದಾಳಿಗೆ ಕುಸಿದ ಅಫ್ಘಾನಿಸ್ತಾನ, 134 ರನ್‌ಗೆ ಸರ್ವಪತನ. 4 ಓವರಲ್ಲಿ 1 ಮೇಡನ್‌ ಸಹಿತ 7 ರನ್‌ಗೆ 3 ವಿಕೆಟ್‌ ಕಿತ್ತ ಬೂಮ್ರಾ

ಬ್ರಿಡ್ಜ್‌ಟೌನ್‌: ತಾರಾ ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ ದೊಡ್ಡ ಮೊತ್ತ ಕಲೆಹಾಕಿ, ಬಳಿಕ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್‌-8ರ ಮೊದಲ ಪಂದ್ಯದಲ್ಲಿ ಭಾರತಕ್ಕೆ ಅಮೋಘ ಗೆಲುವು ಸಾಧಿಸಿದೆ. ಗುರುವಾರ ಅಫ್ಘಾನಿಸ್ತಾನ ವಿರುದ್ಧ ರೋಹಿತ್‌ ಶರ್ಮಾ ಪಡೆ 47 ರನ್‌ ಜಯಭೇರಿ ಬಾರಿಸಿ ಉತ್ತಮ ನೆಟ್‌ ರನ್‌ರೇಟ್‌ ಸಂಪಾದಿಸಿತು. 

ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಹೆಚ್ಚಾಗಿ ಬೌಲರ್‌ಗಳ ಬಲದಿಂದಲೇ ಗೆದ್ದಿದ್ದ ಟೀಂ ಇಂಡಿಯಾ, ನಿರ್ಣಾಯಕ ಘಟ್ಟದಲ್ಲಿ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.ಮೊದಲು ಬ್ಯಾಟ್‌ ಮಾಡಿದ ಭಾರತ, ನಿಧಾನಗತಿ ಪಿಚ್‌ನಲ್ಲೂ 8 ವಿಕೆಟ್‌ಗೆ 180 ರನ್‌ ಕಲೆಹಾಕಿತು. ಬೌಲಿಂಗ್‌ನಲ್ಲಿ ಮತ್ತೆ ಚಾಕಚಕ್ಯತೆ ಪ್ರದರ್ಶಿಸಿದ ಟೀಂ ಇಂಡಿಯಾ, ಆಫ್ಘನ್ನರನ್ನು 134 ರನ್‌ಗೆ ಕಟ್ಟಿ ಹಾಕಿತು.ಪವರ್‌-ಪ್ಲೇ ಮುಕ್ತಾಯಕ್ಕೂ ಮುನ್ನವೇ ಅಗ್ರ-3 ಬ್ಯಾಟರ್‌ಗಳಾದ ಗುರ್ಬಾಜ್‌(11), ಹಜ್ರತುಲ್ಲಾ ಜಜಾಯ್‌(02) ಹಾಗೂ ಜದ್ರಾನ್‌(08) ಪೆವಿಲಿಯನ್‌ಗೆ ಸೇರಿದ್ದರು. 

ತನ್ನ ಸ್ಫೋಟಕ ಬ್ಯಾಟರ್‌ಗಳು ಆರಂಭದಲ್ಲೇ ಔಟಾಗಿದ್ದರಿಂದ ಒತ್ತಡಕ್ಕೊಳಗಾದ ಆಫ್ಘನ್‌ಗೆ ಆ ಬಳಿಕ ಹೆಚ್ಚಿನ ಪ್ರತಿರೋಧ ತೋರಲಾಗಲಿಲ್ಲ. ಓಮರ್‌ಜಾಯ್‌ 26, ನಜೀಬುಲ್ಲಾ ಜದ್ರಾನ್‌ 19 ರನ್ ಗಳಿಸಲಷ್ಟೇ ಶಕ್ತರಾದರು. ಮತ್ತೊಮ್ಮೆ ಅಭೂತಪೂರ್ವ ದಾಳಿ ಸಂಘಟಿಸಿದ ಜಸ್‌ಪ್ರೀತ್‌ ಬೂಮ್ರಾ, 4 ಓವರಲ್ಲಿ 1 ಮೇಡಿನ್‌ ಸಹಿತ 7 ರನ್‌ಗೆ 3 ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸೂರ್ಯ ಮಿಂಚು: ಭಾರತ ಈ ಪಂದ್ಯದಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲಕ್ಕೊಳಗಾಯಿತು. ಕೊಹ್ಲಿ(24) ಟೂರ್ನಿಯಲ್ಲಿ ಮೊದಲ ಸಲ ಎರಡಂಕಿ ಮೊತ್ತ ಗಳಿಸಿದರೂ, ದೊಡ್ಡ ಇನ್ನಿಂಗ್ಸ್‌ ಮೂಡಿ ಬರಲಿಲ್ಲ. ರೋಹಿತ್‌(08), ರಿಷಭ್‌ ಪಂತ್‌(20), ಶಿವಂ ದುಬೆ(10) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. 11 ಓವರಲ್ಲಿ 90ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಸೂರ್ಯಕುಮಾರ್‌ ಆಸರೆಯಾದರು. ಸತತ 2ನೇ ಅರ್ಧಶತಕ ಪೂರ್ಣಗೊಳಿಸಿದ ಸೂರ್ಯ, 28 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ನೊಂದಿಗೆ 53 ರನ್‌ ಗಳಿಸಿ ಔಟಾದರು. ಹಾರ್ದಿಕ್‌ ಪಾಂಡ್ಯ(32), ಅಕ್ಷರ್‌(12) ಕೊಡುಗೆ ತಂಡವನ್ನು 180ರ ಗಡಿ ತಲುಪಿಸಿತು. ಫಾರೂಖಿ, ರಶೀದ್‌ ಖಾನ್‌ ತಲಾ 3 ವಿಕೆಟ್ ಕಿತ್ತರು.

ರೋಹಿತ್‌ರನ್ನು ಮತ್ತೆ ಹಿಂದಿಕ್ಕಿದ ವಿರಾಟ್‌

ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ರನ್‌ ಕಲೆಹಾಕಿದವರ ಪಟ್ಟಿಯಲ್ಲಿ ರೋಹಿತ್‌ ಶರ್ಮಾರನ್ನು ಹಿಂದಿಕ್ಕಿದ ವಿರಾಟ್‌ ಕೊಹ್ಲಿ ಮತ್ತೆ 2ನೇ ಸ್ಥಾನಕ್ಕೇರಿದ್ದಾರೆ. ಗುರುವಾರದ ಪಂದ್ಯಕ್ಕೂ ಮುನ್ನ ಇಬ್ಬರೂ ತಲಾ 4066 ರನ್‌ ಗಳಿಸಿದ್ದರು. ಪಂದ್ಯದಲ್ಲಿ ರೋಹಿತ್‌ 8 ರನ್‌ಗೆ ಔಟಾದರೆ, 24 ರನ್‌ ಗಳಿಸಿದ ವಿರಾಟ್‌ ಒಟ್ಟಾರೆ ಅಂ.ರಾ. ಟಿ20 ರನ್‌ ಗಳಿಕೆಯನ್ನು 4066ಕ್ಕೆ ಹೆಚ್ಚಿಸಿ 2ನೇ ಸ್ಥಾನ ಪಡೆದರು. ಬಾಬರ್‌ ಆಜಂ 4145 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

10 ಕ್ಯಾಚ್‌: ಭಾರತ ಮೊದಲ ಬಾರಿ ಟಿ20 ಪಂದ್ಯದಲ್ಲಿ ಇನ್ನಿಂಗ್ಸ್‌ನ ಎಲ್ಲಾ ವಿಕೆಟ್‌ಗಳನ್ನು ಕ್ಯಾಚ್‌ ಮೂಲಕ ಪಡೆಯಿತು.

20 ಡಾಟ್‌: ಪಂದ್ಯದಲ್ಲಿ ಬೂಮ್ರಾರ 4 ಓವರ್‌ಗಳಲ್ಲಿ 20 ಡಾಟ್‌ ಬಾಲ್‌ಗಳಿದ್ದವು.

07 ರನ್‌: ಬೂಮ್ರಾ 4 ಓವರಲ್ಲಿ 7 ರನ್‌ ಕೊಟ್ಟರು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬೌಲರ್‌ 4 ಓವರಲ್ಲಿ ನೀಡಿದ ಕನಿಷ್ಠ ರನ್‌.