ಸಾರಾಂಶ
ರಾಜ್‌ಗಿರ್: ಏಷ್ಯನ್ ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ 2 ಬಾರಿ ಚಾಂಪಿಯನ್ ಭಾರತ ತಂಡ ದಾಖಲೆಯ 5ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆದ 8ನೇ ಆವೃತ್ತಿಯ ಟೂರ್ನಿಯ ಸೆಮಿಫೈನಲ್‌ನಲ್ಲಿ ಆತಿಥೇಯ ಭಾರತ, 2 ಬಾರಿ ಚಾಂಪಿಯನ್ ಜಪಾನ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.ಪಂದ್ಯದ ಆರಂಭದಲ್ಲಿ ಉಭಯ ತಂಡಗಳಿಂದ ತೀವ್ರ ಪೈಪೋಟಿ ಕಂಡುಬಂತು. 48ನೇ ನಿಮಿಷದಲ್ಲಿ ಉಪನಾಯಕಿ ನವ್‌ನೀತ್ ಕೌರ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಬಾರಿಸಿ ಭಾರತದ ಖಾತೆ ತೆರೆದರೆ, 56ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದ ಲಾಲರೆಮ್‌ಸಿಯಾಮಿ ತಂಡವನ್ನು ಫೈನಲ್‌ಗೇರಿಸಿದರು. ಭಾರತ ತಂಡ ಪಂದ್ಯದಲ್ಲಿ 13 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರೂ ಹೆಚ್ಚಿನ ಗೋಲು ಗಳಿಸಲಾಗಲಿಲ್ಲ. ಲೀಗ್ ಹಂತದ ಕೊನೆ ಪಂದ್ಯದಲ್ಲೂ ಭಾರತ, ಜಪಾನ್ ವಿರುದ್ಧ ಗೆದ್ದಿತ್ತು.ಮಂಗಳವಾರ ನಡೆದ ಮತ್ತೊಂದು ಸೆಮಿಫೈನಲ್‌ನಲ್ಲಿ ಚೀನಾ ತಂಡ ಮಲೇಷ್ಯಾ ವಿರುದ್ಧ 3-1 ಗೋಲುಗಳಿಂದ ಗೆಲುವು ಸಾಧಿಸಿ, 3ನೇ ಬಾರಿ ಫೈನಲ್ ಪ್ರವೇಶಿಸಿತು.ಇಂದು ಫೈನಲ್: 3ನೇ ಪ್ರಶಸ್ತಿ ಗೆಲ್ಲುತ್ತಾ ಭಾರತ?
ಟೂರ್ನಿಯ ಫೈನಲ್ ಬುಧವಾರ ನಡೆಯಲಿದೆ. ಭಾರತ ಹಾಗೂ ಚೀನಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಲೀಗ್ ಹಂತದಲ್ಲಿ ಭಾರತ ತಂಡ ಚೀನಾ ವಿರುದ್ಧ ಗೆದ್ದಿದ್ದು, ಮತ್ತೊಂದು ಜಯದ ಕಾತರದಲ್ಲಿದೆ. ಉಭಯ ತಂಡಗಳು 2016ರ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಭಾರತ ಗೆದ್ದಿತ್ತು. 2013, 2018ರಲ್ಲಿ ರನ್ನರ್-ಅಪ್, 2016, 2023ರ ಚಾಂಪಿಯನ್ ಭಾರತ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2011, 2016ರ ರನ್ನರ್-ಅಪ್ ಚೀನಾ ಚೊಚ್ಚಲ ಟ್ರೋಫಿ ಗೆಲ್ಲುವ ಕಾತರದಲ್ಲಿದೆ.