ಸಾರಾಂಶ
ಚೆನ್ನೈ: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ 3ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಭಾರತ 10 ವಿಕೆಟ್ ಭರ್ಜರಿ ಜಯಗಳಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
\ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿದ್ದರೆ, 2ನೇ ಪಂದ್ಯ ಮಳೆಯಿಂದ ರದ್ದಾಗಿತ್ತು.ಮಂಗಳವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದ.ಆಫ್ರಿಕಾ 17.1 ಓವರ್‌ಗಳಲ್ಲಿ 84 ರನ್‌ಗೆ ಆಲೌಟಾಯಿತು. ತಾಜ್ಮಿನ್ ಬ್ರಿಟ್ಸ್(20) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಪೂಜಾ ವಸ್ತ್ರಾಕರ್ 13 ರನ್‌ಗೆ 3 ವಿಕೆಟ್, ರಾಧಾ ಯಾಧವ್ 6 ರನ್‌ಗೆ 3 ವಿಕೆಟ್ ಕಿತ್ತರು. ಸುಲಭ ಗುರಿಯನ್ನು ಭಾರತ 10.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಬೆನ್ನತ್ತಿ ಜಯಗಳಿಸಿತು. ಸ್ಮೃತಿ ಮಂಧನಾ 40 ಎಸೆತಗಳಲ್ಲಿ 54, ಶಫಾಲಿ ವರ್ಮಾ ಔಟಾಗದೆ 27 ರನ್ ಗಳಿಸಿದರು.
ಆ್ಯಂಡರ್‌ಸನ್ ಆಡಲಿರುವ ಕೊನೆ ಟೆಸ್ಟ್ ಇಂದು ಶುರು
ಲಾರ್ಡ್ಸ್: ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿರುವ ದಿಗ್ಗಜ ವೇಗಿ ಜೇಮ್ಸ್ ಆ್ಯಂಡರ್‌ಸನ್ ಇಂಗ್ಲೆಂಡ್ ಪರ ಕೊನೆ ಬಾರಿ ಟೆಸ್ಟ್ ಆಡಲು ಸಜ್ಜಾಗಿದ್ದು, ಬುಧವಾರದಿಂದ ಲಾರ್ಡ್ಸ್‌ನಲ್ಲಿ ಆರಂಭಗೊಳ್ಳಲಿರುವ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯದೊಂದಿಗೆ ಆ್ಯಂಡರ್‌ಸನ್‌ರ 22 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ತೆರೆ ಬೀಳಲಿದೆ.41 ವರ್ಷದ ಆ್ಯಂಡರ್‌ಸನ್ ಈ ವರೆಗೂ ಇಂಗ್ಲೆಂಡ್ ಪರ 187 ಟೆಸ್ಟ್ ಪಂದ್ಯಗಳನ್ನಾಡಿದ್ದು, 700 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಕಿತ್ತ ವೇಗಿಗಳ ಪೈಕಿ ಅಗ್ರಸ್ಥಾನ, ಒಟ್ಟಾರೆ ಟೆಸ್ಟ್‌ನ ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 2002ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಆ್ಯಂಡರ್‌ಸನ್, ಇಂಗ್ಲೆಂಡ್ ಪರ 2009ರಲ್ಲಿ ಕೊನೆ ಟಿ20, 2015ರಲ್ಲಿ ಕೊನೆ ಬಾರಿ ಏಕದಿನ ಪಂದ್ಯವಾಡಿದ್ದಾರೆ.
ಪಂದ್ಯ: ಮಧ್ಯಾಹ್ನ 3.30ಕ್ಕೆ ಆರಂಭ(ಭಾರತೀಯ ಕಾಲಮಾನ)