ಹಾರ್ದಿಕ್‌ ಪಾಂಡ್ಯ ಅಮೋಘ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 101 ರನ್‌ ಗೆಲುವು ಭರ್ಜರಿ ಜಯಗಳಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

 ಕಟಕ್‌: ಹಾರ್ದಿಕ್‌ ಪಾಂಡ್ಯ ಅಮೋಘ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 101 ರನ್‌ ಗೆಲುವು ಭರ್ಜರಿ ಜಯಗಳಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 6 ವಿಕೆಟ್‌ಗೆ 175 ರನ್‌ ಕಲೆಹಾಕಿತು. ಅಭಿಷೇಕ್‌ ಶರ್ಮಾ(17), ಉಪನಾಯಕ ಶುಭ್‌ಮನ್‌ ಗಿಲ್‌(4), ನಾಯಕ ಸೂರ್ಯಕುಮಾರ್‌ ಯಾದವ್(12) ವಿಫಲರಾದರು. ತಿಲಕ್‌ ವರ್ಮಾ(26) ಹಾಗೂ ಅಕ್ಷರ್‌ ಪಟೇಲ್‌(23) ಕೆಲ ಹೊತ್ತು ಕ್ರೀಸ್‌ನಲ್ಲಿದ್ದರೂ ದೊಡ್ಡ ಮೊತ್ತ ಗಳಿಸಲಾಗಲಿಲ್ಲ. 12 ಓವರ್‌ಗಳಲ್ಲಿ ತಂಡ 4 ವಿಕೆಟ್‌ ನಷ್ಟದಲ್ಲಿ ಕೇವಲ 80 ರನ್‌ ಗಳಿಸಿತ್ತು. ಈ ವೇಳೆ ತಂಡವನ್ನು ಮೇಲೆತ್ತಿದ್ದು ಹಾರ್ದಿಕ್‌. ಸ್ಫೋಟಕ ಆಟವಾಡಿದ ಅವರು ಕೇವಲ 28 ಎಸೆತಗಳಲ್ಲೇ 6 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಔಟಾಗದೆ 59 ರನ್‌ ಸಿಡಿಸಿದರು. ತಂಡ ಕೊನೆ 8 ಓವರಲ್ಲಿ 95 ರನ್‌ ಗಳಿಸಿತು.

ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ ತೀವ್ರ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಭಾರತದ ಸಂಘಟಿತ ದಾಳಿಗೆ ತತ್ತರಿಸಿದ ಆಫ್ರಿಕಾ, 12.3 ಓವರ್‌ಗಳಲ್ಲಿ ಕೇವಲ 74 ರನ್‌ಗೆ ಆಲೌಟಾಯಿತು. ಡೆವಾಲ್ಡ್‌ ಬ್ರೆವಿಸ್‌(22) ತಂಡದ ಪರ ಗರಿಷ್ಠ ರನ್‌ ಗಳಿಸಿದರು. ಬೂಮ್ರಾ, ಅರ್ಶ್‌ದೀಪ್‌, ವರುಣ್‌, ಅಕ್ಷರ್‌ ತಲಾ 2, ಹಾರ್ದಿಕ್‌, ಶಿವಂ ದುಬೆ ತಲಾ 1 ವಿಕೆಟ್‌ ಪಡೆದರು.

ಸ್ಕೋರ್‌: ಭಾರತ 20 ಓವರಲ್ಲಿ 175/6 (ಹಾರ್ದಿಕ್‌ 59*, ತಿಲಕ್‌ 26, ಎನ್‌ಗಿಡಿ 3-31), ದ.ಆಫ್ರಿಕಾ 12.3 ಓವರ್‌ನಲ್ಲಿ 74/10 (ಬ್ರೆವಿಸ್‌ 22, ಅಕ್ಷರ್ 2-7, ಅರ್ಶ್‌ದೀಪ್‌ 2-14, ಬೂಮ್ರಾ 2-17, ವರುಣ್‌ 2-19)

ಪಂದ್ಯಶ್ರೇಷ್ಠ: ಹಾರ್ದಿಕ್‌ ಪಾಂಡ್ಯ

100 ಸಿಕ್ಸರ್

ಅಂ.ರಾ. ಟಿ20ಯಲ್ಲಿ 100 ಸಿಕ್ಸರ್‌ ಸಿಡಿಸಿದ 4ನೇ ಭಾರತೀಯ ಹಾರ್ದಿಕ್‌. ರೋಹಿತ್‌ 205, ಸೂರ್ಯ 155, ಕೊಹ್ಲಿ 124 ಸಿಕ್ಸರ್‌ ಬಾರಿಸಿದ್ದಾರೆ.

3 ಮಾದರಿಯಲ್ಲಿ ತಲಾ 100 ವಿಕೆಟ್‌: ಬೂಮ್ರಾ ಭಾರತದ ಮೊದಲಿಗ

ಎಲ್ಲಾ 3 ಮಾದರಿ(ಟೆಸ್ಟ್‌, ಏಕದಿನ, ಅಂ.ರಾ. ಟಿ20) ಕ್ರಿಕೆಟ್‌ನಲ್ಲೂ ತಲಾ 100+ ವಿಕೆಟ್‌ ಕಿತ್ತ ಭಾರತದ ಮೊದಲ ಬೌಲರ್ ಬೂಮ್ರಾ. ಅವರು ಭಾರತದ ಪರ ಟೆಸ್ಟ್‌ನಲ್ಲಿ 234, ಏಕದಿನದಲ್ಲಿ 149, ಟಿ20ಯಲ್ಲಿ 100 ವಿಕೆಟ್‌ ಪಡೆದಿದ್ದಾರೆ. ಈ ಸಾಧನೆ ಮಾಡಿದ ಇತರ ಬೌಲರ್‌ಗಳೆಂದರೆ ಲಸಿತ್‌ ಮಾಲಿಂಗಾ, ಟಿಮ್‌ ಸೌಥಿ, ಶಕೀಬ್‌ ಅಲ್‌ ಹಸನ್‌, ಶಾಹೀನ್‌ ಅಫ್ರಿದಿ.