ಪಾಕ್‌ ಎದುರಿನ ಭಾರತದ ಸಪ್ತ ಗೆಲುವಿನಾಚೆ ಹಲವು ದಾಖಲೆ

| Published : Jun 11 2024, 01:31 AM IST / Updated: Jun 11 2024, 04:05 AM IST

ಸಾರಾಂಶ

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ 7ನೇ ಗೆಲುವು. ಇದು ಹೊಸ ದಾಖಲೆ. ಪಂದ್ಯದಲ್ಲೂ ಹಲವು ದಾಖಲೆ ಬರೆದ ಟೀಂ ಇಂಡಿಯಾ

ನ್ಯೂಯಾರ್ಕ್‌: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಂದಾಗ ಅಲ್ಲಿ ಕೌತುಕ, ವಾಗ್ವಾದ, ರೋಚಕತೆ ಕಂಡುಬರುವುದು ಸಹಜ. ಇತ್ತಂಡಗಳಿಂದಲೂ ಗೆಲುವಿಗಾಗಿ ತೀವ್ರ ಪೈಪೋಟಿ, ಪ್ರಬಲ ಹೋರಾಟ ಕಂಡುಬರುತ್ತದೆ. ಆದರೆ ಫಲಿತಾಂಶದ ವಿಚಾರದಲ್ಲಿ ಭಾರತ ಯಾವತ್ತೂ ಪಾಕ್‌ಗಿಂತ ಹತ್ತು ಹೆಜ್ಜೆ ಮುಂದಿದೆ. ಅದು ಭಾನುವಾರದ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಯಿತು.

ಈ ಬಾರಿಯದ್ದು ಟಿ20 ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತಕ್ಕೆ ಲಭಿಸಿದ 7ನೇ ಗೆಲುವು. ಟಿ20 ವಿಶ್ವಕಪ್‌ನಲ್ಲಿ ತಂಡವೊಂದರ ವಿರುದ್ಧ ಯಾವುದೇ ತಂಡಕ್ಕೆ ಸಿಕ್ಕ ಅತಿ ಹೆಚ್ಚು ಗೆಲುವು ಎಂಬ ಖ್ಯಾತಿಗೆ ಈಗ ಭಾರತ ಪಾತ್ರವಾಗಿದೆ. 2021ರ ವಿಶ್ವಕಪ್‌ನಲ್ಲಿ ಒಂದು ಪಂದ್ಯ ಸೋತಿದ್ದು ಬಿಟ್ಟರೆ ಭಾರತ 2007ರ ಟೂರ್ನಿಯ ಫೈನಲ್‌ ಸೇರಿ ಎಲ್ಲಾ ಪಂದ್ಯಗಳಲ್ಲೂ ಪಾಕ್‌ ವಿರುದ್ಧ ಗೆದ್ದಿದೆ. ಈ ಮೊದಲು ತಂಡವೊಂದರ ವಿರುದ್ಧ ಗರಿಷ್ಠ ಪಂದ್ಯ ಗೆದ್ದ ದಾಖಲೆ ಪಾಕ್‌ ಹೆಸರಲ್ಲಿತ್ತು. ಬಾಂಗ್ಲಾ ವಿರುದ್ಧ ಪಾಕ್‌ ಟಿ20 ವಿಶ್ವಕಪ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲೂ ಗೆದ್ದಿದ್ದು ಈ ವರೆಗಿನ ದಾಖಲೆಯಾಗಿತ್ತು. ಅದನ್ನು ಈಗ ಭಾರತ ಹಿಂದಿಕ್ಕಿದೆ. ಭಾನುವಾರದ ಪಂದ್ಯದಲ್ಲಿ ಭಾರತ ತಂಡ ಇನ್ನೂ ಕೆಲ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

ಕನಿಷ್ಠ ರನ್‌ ರಕ್ಷಿಸಿ ಗೆದ್ದ ಭಾರತ

ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಜಂಟಿ ಅತಿ ಕನಿಷ್ಠ ಸ್ಕೋರ್‌(120) ರಕ್ಷಿಸಿ ಗೆದ್ದ ಸಾಧನೆ ಮಾಡಿತು. ಈ ಮೊದಲು 2014ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಶ್ರೀಲಂಕಾ ತಂಡ 120 ರನ್‌ ರಕ್ಷಿಸಿ ಗೆಲುವು ಸಾಧಿಸಿತ್ತು. ಉಳಿದಂತೆ 2016ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಅಫ್ಘಾನಿಸ್ತಾನ 124, ಭಾರತ ವಿರುದ್ಧ ನ್ಯೂಜಿಲೆಂಡ್‌ 127 ರನ್‌ ರಕ್ಷಿಸಿ ಗೆಲುವು ತನ್ನದಾಗಿಸಿಕೊಂಡಿದ್ದವು. 

ಟಿ20ಯಲ್ಲಿ ಆಲೌಟಾಗಿ ಪಂದ್ಯ ಗೆದ್ದ 6ನೇ ತಂಡ

ಭಾರತ ಟಿ20 ಕ್ರಿಕೆಟ್‌ನಲ್ಲಿ ಆಲೌಟಾದರೂ ಪಂದ್ಯ ಗೆದ್ದ 6ನೆ ತಂಡ. 2007ರಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್‌, 2010ರಲ್ಲಿ ಪಾಕ್‌ ವಿರುದ್ಧ ಆಸ್ಟ್ರೇಲಿಯಾ, 2014ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಶ್ರೀಲಂಕಾ, 2021ರಲ್ಲಿ ಒಮಾನ್‌ ವಿರುದ್ಧ ಬಾಂಗ್ಲಾದೇಶ, 2022ರಲ್ಲಿ ಇಂಗ್ಲೆಂಡ್‌ ವಿರುದ್ಧ ಐರ್ಲೆಂಡ್‌ ಗೆದ್ದಿತ್ತು.

ವಿಶ್ವಕಪ್‌ ಮುಖಾಮಖಿಯಲ್ಲಿ ಭಾರತ 15, ಪಾಕ್‌ಗೆ 1 ಜಯ

ಬದ್ಧವೈರಿಗಳಾದ ಭಾರತ ಹಾಗೂ ಪಾಕ್‌ ತಂಡಗಳು ಈ ವರೆಗೂ ಟಿ20 ಹಾಗೂ ಏಕದಿನ ವಿಶ್ವಕಪ್‌ ಸೇರಿ ಒಟ್ಟು 16 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 15 ಪಂದ್ಯಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿವೆ. ಏಕದಿನ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಈ ವರೆಗೂ ಒಂದು ಪಂದ್ಯದಲ್ಲೂ ಗೆದ್ದಿಲ್ಲ. 1992, 1996, 1999, 2003, 2011, 2015, 2019 ಹಾಗೂ 2023ರ ವಿಶ್ವಕಪ್‌ಗಳಲ್ಲಿ ಭಾರತ ತಂಡ ಪಾಕ್‌ ವಿರುದ್ಧ ಜಯಭೇರಿ ಬಾರಿಸಿದೆ. ಇನ್ನು, ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ 2007ರಲ್ಲಿ 2012, 2014, 2016 ಹಾಗೂ 2022ರಲ್ಲಿ ಗೆದ್ದಿದೆ. 2021ರಲ್ಲಿ ಮಾತ್ರ ಪಾಕ್‌ ಗೆಲುವು ಸಾಧಿಸಿತ್ತು.