ಸಾರಾಂಶ
ಸತತ 2ನೇ ಗೆಲುವಿನೊಂದಿಗೆ ಸೆಮಿಫೈನಲ್‌ಗೇರುತ್ತಾ ಭಾರತ ತಂಡ?. ಸೋತರೆ ತಂಡ ಸೆಮೀಸ್‌ಗೇರಲು ಕೊನೆ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.
ದಾಂಬುಲಾ: 9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಸೆಮಿಫೈನಲ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತ ತಂಡ, ಭಾನುವಾರ ಗುಂಪು ಹಂತದ 2ನೇ ಪಂದ್ಯದಲ್ಲಿ ಯುಎಇ ವಿರುದ್ಧ ಸೆಣಸಾಡಲಿದೆ. ಹಾಲಿ ಹಾಗೂ 7 ಬಾರಿ ಚಾಂಪಿಯನ್ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ.
ಆರಂಭಿಕ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿರುವ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ ಸದ್ಯ ‘ಎ’ ಗುಂಪಿನಲ್ಲಿ 2 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
\\\\\\\\ತಂಡ ಉತ್ತಮ ನೆಟ್ ರನ್‌ರೇಟ್(+2.29) ಕೂಡಾ ಹೊಂದಿರುವುದರಿಂದ ಯುಎಇ ವಿರುದ್ಧ ಗೆದ್ದರೆ ಭಾರತದ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತವಾಗಲಿದೆ. ಒಂದು ವೇಳೆ ಸೋತರೆ ತಂಡ ಸೆಮೀಸ್‌ಗೇರಲು ಕೊನೆ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.
ಭಾರತದ ಆಟಗಾರರು ಉತ್ತಮ ಲಯದಲ್ಲಿದ್ದು, ಸ್ಮೃತಿ ಮಂಧನಾ, ಶಫಾಲಿ ವರ್ಮಾ ಅಬ್ಬರಿಸುತ್ತಿದ್ದಾರೆ. ಜೆಮಿಮಾ ರೋಡ್ರಿಗ್ಸ್, ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡಾ ಅಬ್ಬರಿಸಬೇಕಾದ ಅಗತ್ಯವಿದೆ. ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್, ಪೂಜಾ, ರಾಧಾ ಯಾದವ್ ಎದುರಾಳಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ದೀಪ್ತಿ ಶರ್ಮಾ ಆಲ್ರೌಂಡ್ ಆಟದ ಮೂಲಕ ತಂಡಕ್ಕೆ ಮತ್ತೊಂದು ಗೆಲುವಿನ ಉಡುಗೊರೆ ನೀಡಲು ಕಾಯುತ್ತಿದ್ದಾರೆ.ಪುಟಿದೇಳುವ ಗುರಿ: ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲಿ ನೇಪಾಳ ವಿರುದ್ಧ 6 ವಿಕೆಟ್ ಸೋಲನುಭವಿಸಿರುವ ಯುಎಇ ಪುಟಿದೇಳುವ ನಿರೀಕ್ಷೆಯಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ತಂಡದ ಸೆಮಿಫೈನಲ್ ಕನಸು ಜೀವಂತವಾಗಿರಲಿದೆ.
ಪಂದ್ಯ: ಮಧ್ಯಾಹ್ನ 2 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.
ಪಾಕ್‌ಗೆ ನೇಪಾಳ ಎದುರಾಳಿ
ಭಾನುವಾರ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ಮುಖಾಮುಖಿಯಾಗಲಿವೆ. ನೇಪಾಳ ಸತತ 2ನೇ ಜಯದ ನಿರೀಕ್ಷೆಯಲ್ಲಿದ್ದರೆ, ಪಾಕ್ ತಂಡ ಭಾರತ ವಿರುದ್ಧದ ಸೋಲಿನ ಆಘಾತದಿಂದ ಹೊರಬಂದು ಗೆಲ್ಲುವ ಕಾತರದಲ್ಲಿದೆ.