ಮಹಿಳಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಇಂದು ಭಾರತ vs ಜಪಾನ್‌ ಸೆಮೀಸ್‌

| Published : Nov 19 2024, 12:52 AM IST / Updated: Nov 19 2024, 04:00 AM IST

ಸಾರಾಂಶ

ರೌಂಡ್‌ ರಾಬಿನ್‌ ಹಂತದ ಕೊನೆಯ ಪಂದ್ಯದಲ್ಲಿ ಜಪಾನ್‌ಗೆ ಸೋಲುಣಿಸಿದ್ದ ಭಾರತಕ್ಕೆ ಮತ್ತೊಂದು ಜಯದ ಗುರಿ. ಇನ್ನೊಂದು ಸೆಮೀಸ್‌ನಲ್ಲಿ ಚೀನಾ-ಮಲೇಷ್ಯಾ ಮುಖಾಮುಖಿ.

ರಾಜ್ಗಿರ್‌(ಬಿಹಾರ್): ಮಹಿಳಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಂಗಳವಾರ ಭಾರತ ತಂಡಕ್ಕೆ ಜಪಾನ್‌ ಸವಾಲು ಎದುರಾಗಲಿದೆ. ಅಜೇಯವಾಗಿ ಸೆಮಿಫೈನಲ್‌ ಪ್ರವೇಶಿಸಿರುವ ಭಾರತ, ರೌಂಡ್‌ ರಾಬಿನ್‌ ಹಂತದ ಕೊನೆಯ ಪಂದ್ಯದಲ್ಲಿ ಜಪಾನ್‌ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಇದೀಗ ಮತ್ತೊಂದು ಜಯದೊಂದಿಗೆ ಫೈನಲ್‌ಗೇರಲು ಎದುರು ನೋಡುತ್ತಿದೆ.

ಆತಿಥೇಯ ಹಾಗೂ ಹಾಲಿ ಚಾಂಪಿಯನ್‌ ತಂಡವಾಗಿರುವ ಭಾರತ, ಟೂರ್ನಿ ಗೆಲ್ಲುವ ಫೇವರಿಟ್ಸ್‌ ಎನಿಸಿದ್ದು, ರೌಂಡ್‌ ರಾಬಿನ್‌ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಭಾರತ, ಪ್ಯಾರಿಸ್‌ ಒಲಿಂಪಿಕ್ಸ್‌ ಬೆಳ್ಳಿ ವಿಜೇತ, ವಿಶ್ವ ನಂ.6 ಚೀನಾವನ್ನೂ ಪರಾಭವಗೊಳಿಸಿತ್ತು.

ರೌಂಡ್ ರಾಬಿನ್‌ ಹಂತದ 5 ಪಂದ್ಯಗಳಲ್ಲಿ ಭಾರತ 26 ಗೋಲು ದಾಖಲಿಸಿ ಕೇವಲ 2 ಗೋಲು ಬಿಟ್ಟುಕೊಟ್ಟಿದೆ. ಇದೇ ಲಯವನ್ನು ನಾಕೌಟ್‌ ಹಂತದಲ್ಲೂ ಮುಂದುವರಿಸಲು ತಂಡ ಎದುರು ನೋಡುತ್ತಿದೆ. ದೀಪಿಕಾ ಶೆರಾವತ್‌ ಒಟ್ಟು 10 ಗೋಲು ಬಾರಿಸಿದ್ದು, ಅವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.

ಮತ್ತೊಂದು ಸೆಮಿಫೈನಲ್‌ನಲ್ಲಿ ಚೀನಾ ಹಾಗೂ ಮಲೇಷ್ಯಾ ತಂಡಗಳು ಸೆಣಸಲಿವೆ. ಬುಧವಾರ ಫೈನಲ್‌ ನಡೆಯಲಿದೆ. ಭಾರತ vs ಜಪಾನ್‌ ಪಂದ್ಯ: ಸಂಜೆ 4.45ಕ್ಕೆ, ನೇರ ಪ್ರಸಾರ: ಸೋನಿ ಲಿವ್‌, ಡಿಡಿ ಸ್ಪೋರ್ಟ್ಸ್‌