ಬಾಂಗ್ಲಾದೇಶಕ್ಕೆ ಮಣ್ಣು ಮುಕ್ಕಿಸಿ ಗೆಲ್ಲುತ್ತಾ ಭಾರತ? : ಇಂದು ದುಬೈನಲ್ಲಿ ಮೆಗಾ ಫೈಟ್‌

| N/A | Published : Feb 20 2025, 12:46 AM IST / Updated: Feb 20 2025, 04:13 AM IST

ಸಾರಾಂಶ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ. ಆಯ್ಕೆ ಗೊಂದಲ ನಡುವೆ ಬಲಿಷ್ಠ ತಂಡ ಕಣಕ್ಕಿಳಿಸಿ ಗೆಲ್ಲಲು ಭಾರತ ಪ್ಲ್ಯಾನ್‌. ಕೊಹ್ಲಿ, ರೋಹಿತ್‌ ಮೇಲೆ ಚಿತ್ತ. ಬೂಮ್ರಾ ಗೈರಿನಲ್ಲಿ ಬೌಲರ್‌ಗಳ ಮೇಲೆ ಒತ್ತಡ.

ದುಬೈ: 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ನಿರೀಕ್ಷೆಯಲ್ಲಿರುವ ಭಾರತ ತಂಡ, ಗುರುವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಅನುಪಸ್ಥಿತಿ ಹಾಗೂ ಆಟಗಾರರ ಆಯ್ಕೆ ಗೊಂದಲ ನಡುವೆ ಬಲಿಷ್ಠ ತಂಡ ಕಣಕ್ಕಿಳಿಸಿ ದೊಡ್ಡ ಗೆಲುವು ಸಾಧಿಸುವುದು ಭಾರತದ ಗುರಿ.

 ಪಂದ್ಯಕ್ಕೆ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಭಾರತ ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದರೂ, ತಂಡದಲ್ಲಿ ಕೆಲ ಸಮಸ್ಯೆಗಳಿವೆ. ರೋಹಿತ್‌ ಶರ್ಮಾ ಫಾರ್ಮ್‌ಗೆ ಮರಳಿದ್ದರೂ, ವಿರಾಟ್‌ ಕೊಹ್ಲಿ ಬ್ಯಾಟ್‌ ಸದ್ದು ಮಾಡಲೇಬೇಕಾದ ಅಗತ್ಯವಿದೆ. ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ ಅಭೂತಪೂರ್ವ ಲಯದಲ್ಲಿದ್ದು, ವಿಕೆಟ್‌ ಕೀಪರ್‌ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಕೂಡಾ ಅಬ್ಬರಿಸಬೇಕಾಗಿದೆ.

ತಂಡಕ್ಕೆ ಹೆಚ್ಚಿನ ತಲೆನೋವಾಗಿದ್ದ ಬೌಲಿಂಗ್‌ ವಿಭಾಗ. ಬೂಮ್ರಾ ಗಾಯದಿಂದಾಗಿ ಆಡುತ್ತಿಲ್ಲ. ಹೀಗಾಗಿ ವೇಗದ ಬೌಲಿಂಗ್‌ ಪಡೆಯಲ್ಲಿ ಅನನುಭವಿಗಳಿದ್ದಾರೆ. ಮೊಹಮದ್‌ ಶಮಿ ಜೊತೆ ಅರ್ಶ್‌ದೀಪ್‌ ಸಿಂಗ್‌ ಅಥವಾ ಹರ್ಷಿತ್‌ ರಾಣಾ ಪೈಕಿ ಯಾರನ್ನು ಆಡಿಸುವುದು ಎಂಬ ಗೊಂದಲವಿದೆ. ಉಳಿದಂತೆ ಆಲ್ರೌಂಡ್‌ ವಿಭಾಗದಲ್ಲಿ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ ಜೊತೆ ಅಕ್ಷರ್‌ ಪಟೇಲ್‌ ತಂಡಕ್ಕೆ ಬಲ ತುಂಬಲಿದ್ದಾರೆ. ಸ್ಪಿನ್ನರ್‌ ಸ್ಥಾನಕ್ಕೆ ಕುಲ್ದೀಪ್‌ ಯಾದವ್‌ ಆಯ್ಕೆಯಾಗಬಹದು. 

ಶಾಕ್ ನೀಡುತ್ತಾ ಬಾಂಗ್ಲಾ?: ಭಾರತಕ್ಕೆ ಹೋಲಿಸಿದರೆ ಬಾಂಗ್ಲಾ ಅಷ್ಟೇನೂ ಬಲಿಷ್ಠವಲ್ಲ. ಆದರೆ ಬಾಂಗ್ಲಾವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ತಂಡದಲ್ಲಿ ಮಹ್ಮೂದುಲ್ಲಾ ಸೌಮ್ಯಾ ಸರ್ಕಾರ್‌, ಮುಷ್ಫಿಕುರ್‌ರಹೀಂ, ನಜ್ಮುಲ್‌ ಹೊಸೈನ್‌, ಮುಸ್ತಾಫಿಜುರ್‌, ತಸ್ಕೀನ್‌ ಅಹ್ಮದ್‌ ಸೇರಿ ಅನುಭವಿ ಆಟಗಾರರಿದ್ದಾರೆ. ಆದರೆ ಅಸಾಧಾರಣ ಪ್ರದರ್ಶನ ನೀಡಿದರಷ್ಟೇ ಭಾರತವನ್ನು ಸೋಲಿಸಲು ಸಾಧ್ಯವಿದೆ.

ಒಟ್ಟು ಮುಖಾಮುಖಿ: 41

ಭಾರತ: 32

ಬಾಂಗ್ಲಾ: 08

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರುಭಾರತ: ರೋಹಿತ್‌(ನಾಯಕ), ಗಿಲ್‌, ವಿರಾಟ್‌, ಶ್ರೇಯಸ್‌, ರಾಹುಲ್‌, ಅಕ್ಷರ್‌, ಹಾರ್ದಿಕ್‌, ಜಡೇಜಾ, ಕುಲ್ದೀಪ್‌, ಅರ್ಶ್‌ದೀಪ್‌, ಶಮಿ. ಬಾಂಗ್ಲಾ: ನಜ್ಮುಲ್‌(ನಾಯಕ), ಸೌಮ್ಯಾ, ತಂಜೀದ್‌, ರಹೀಂ, ಮಹ್ಮೂದುಲ್ಲಾ, ಜಾಕರ್‌, ಮೆಹಿದಿ, ರಿಶಾದ್‌, ತಸ್ಕೀನ್‌, ಮುಸ್ತಾಫಿಜುರ್‌, ನಹಿದ್‌.

ಪಿಚ್ ರಿಪೋರ್ಟ್‌

ದುಬೈ ಕ್ರೀಡಾಂಗಣದ ಪಿಚ್‌ ಸ್ಪರ್ಧಾತ್ಮಕವಾಗಿದ್ದು, ಬ್ಯಾಟರ್‌ಗಳ ಜೊತೆ ಬೌಲರ್‌ಗಳಿಗೂ ಸವಾಲು ಎದುರಾಗಲಿದೆ. ವರದಿಗಳ ಪ್ರಕಾರ ಈ ಪಂದ್ಯಕ್ಕೆ ಹೊಸ ಪಿಚ್‌ ಬಳಕೆ ಮಾಡಲಾಗುತ್ತದೆ. ಹೀಗಾಗಿ ಆರಂಭದಲ್ಲಿ ವೇಗಿಗಳು ಹೆಚ್ಚಿನ ನೆರವು ಪಡೆಯಲಿದ್ದು, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು.

01 ಬಾರಿ: ಭಾರತ-ಬಾಂಗ್ಲಾದೇಶ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಒಮ್ಮೆ ಮುಖಾಮುಖಿಯಾಗಿದೆ. 2017ರ ಸೆಮಿಫೈನಲ್‌ನಲ್ಲಿ ಬಾಂಗ್ಲಾ ವಿರುದ್ಧ ಭಾರತ ಗೆದ್ದಿತ್ತು.