ಸಾರಾಂಶ
ದುಬೈ: ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಈಗಾಗಲೇ ಸೆಮಿಫೈನಲ್‌ಗೆ ಅಧಿಕೃತ ಪ್ರವೇಶ ಪಡೆದಿರುವ 2 ಬಾರಿ ಚಾಂಪಿಯನ್ ಭಾರತ ತಂಡ, ನಾಕೌಟ್ ಹಣಾಹಣಿಗೂ ಮುನ್ನ ಭಾನುವಾರ ನ್ಯೂಜಿಲೆಂಡ್‌ನ ಅಗ್ನಿಪರೀಕ್ಷೆ ಎದುರಿಸಲಿದೆ.
ಇದು ‘ಎ’ ಗುಂಪಿನ ಕೊನೆ ಪಂದ್ಯ. ಈಗಾಗಲೇ ಎರಡೂ ತಂಡಗಳು ಸೆಮಿಫೈನಲ್‌ಗೇರಿರುವುದರಿಂದ ದುಬೈನಲ್ಲಿ ನಡೆಯಲಿರುವ ಈ ಪಂದ್ಯ ಔಪಚಾರಿಕ ಎನಿಸಿದೆ.ಆದರೆ ಗುಂಪು ಹಂತದ ಅಗ್ರಸ್ಥಾನಿಯಾನಿ ಯಾರು ಎಂಬುದನ್ನು ಈ ಪಂದ್ಯ ನಿರ್ಧರಿಸಲಿದೆ. ಸದ್ಯ ಎರಡು ತಂಡಗಳು ಆಡಿರುವ 2 ಪಂದ್ಯಗಳಲ್ಲಿ ತಲಾ 4 ಅಂಕ ಹೊಂದಿದೆ. ಆದರೆ ನೆಟ್ ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ (+0.863) ಅಗ್ರಸ್ಥಾನದಲ್ಲಿದ್ದರೆ, ಭಾರತ(+0.647) ನಂತರದ ಸ್ಥಾನದಲ್ಲಿದೆ. ಭಾನುವಾರದ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೇರಲಿದೆ.
ಸ್ಪಿನ್ನರ್ಸ್ ಎದುರಿಸಲು ಕಸರತ್ತು : ಭಾರತ ತಂಡ ಆಡಿರುವ ಎರಡು ಪಂದ್ಯಗಳಲ್ಲೂ ಉತ್ತಮ ಆಟವಾಡಿ ಗೆದ್ದರೂ, ತಂಡದಲ್ಲಿ ಸಮಸ್ಯೆ ಇಲ್ಲವೆಂದೇನಲ್ಲ. ಬ್ಯಾಟರ್‌ಗಳು ಅಬ್ಬರಿಸಿದ ಹೊರತಾಗಿಯೂ ಸ್ಪಿನ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ ಎಂಬುದು ಸತ್ಯ. ಬಾಂಗ್ಲಾದ ಮೆಹಿದಿ ಹಸನ್(0/37), ರಿಶಾದ್ ಹೊಸೈನ್(2/38) ಹಾಗೂ ಪಾಕಿಸ್ತಾನದ ಅಬ್ರಾರ್ ಅಹ್ಮದ್(1/28) ವಿರುದ್ಧ ಭಾರತೀಯರು ದೊಡ್ಡ ಮಟ್ಟಿನ ಯಶಸ್ಸು ಪಡೆದಿರಲಿಲ್ಲ.
ಮಿಚೆಲ್ ಸ್ಯಾಂಟ್ನರ್, ಮೈಕಲ್ ಬ್ರೇಸ್‌ವೆಲ್ ನ್ಯೂಜಿಲೆಂಡ್ ತಂಡದಲ್ಲಿರುವ ಶ್ರೇಷ್ಠ ಸ್ಪಿನ್ನರ್‌ಗಳು. ಅಲ್ಲದೆ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಎದುರಾಗಬಹುದಾಗ ದ.ಆಫ್ರಿಕಾ, ಆಸ್ಟ್ರೇಲಿಯಾ ತಂಡದಲ್ಲೂ ಉತ್ತಮ ಸ್ಪಿನ್ ಬೌಲರ್‌ಗಳಿದ್ದಾರೆ. ಹೀಗಾಗಿ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ಸ್ಪಿನ್ನರ್‌ಗಳನ್ನು ಎದುರಿಸಲು ತೀವ್ರ ಕಸರತ್ತು ನಡೆಸಬೇಕಿದೆ.
ಬದಲಾವಣೆ ನಿರೀಕ್ಷೆ: ಭಾರತಕ್ಕೆ ಕಿವೀಸ್ ಪಂದ್ಯ ಮಹತ್ವದ್ದಾಗಿದ್ದರೂ ಕೆಲ ಬದಲಾವಣೆ ನಿರೀಕ್ಷಿಸಬಹುದು. ನಾಯಕ ರೋಹಿತ್ ಶರ್ಮಾ, ವೇಗಿ ಮೊಹಮ್ಮದ್ ಶಮಿ ಪಂದ್ಯಕ್ಕೆ ಫಿಟ್ ಆಗಿದ್ದರೂ ಅವರಿಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗುತ್ತಿದೆ. ಇವರಿಬ್ಬರು ಅಲಭ್ಯರಾದರೆ ರಿಷಭ್ ಪಂತ್ ಹಾಗೂ ಅರ್ಶ್‌ದೀಪ್ ಸಿಂಗ್‌ಗೆ ಅವಕಾಶ ಸಿಗಬಹುದು. ಶುಭ್‌ಮನ್ ಗಿಲ್ ತಂಡ ಮುನ್ನಡೆಸಬಹುದು. ಮತ್ತೊಂದೆಡೆ ಕುಲ್ದೀಪ್ ಯಾದವ್‌ರನ್ನು ಈ ಪಂದ್ಯಕ್ಕೆ ಹೊರಗಿಟ್ಟು ವರುಣ್ ಚಕ್ರವರ್ತಿಯನ್ನು ಆಡಿಸಲು ಆಯ್ಕೆ ಸಮಿತಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಹ್ಯಾಟ್ರಿಕ್ ಜಯದ ಗುರಿ: ಮತ್ತೊಂದೆಡೆ ಕಿವೀಸ್ ಈ ಬಾರಿ ಟ್ರೋಫಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದು. ಆಡಿರುವ ಎರಡೂ ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿರುವ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಮುನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸುವ ಕಾತರದಲ್ಲಿದೆ.
ಸಂಭವನೀಯ ಆಟಗಾರರು
ಭಾರತ: ರೋಹಿತ್(ನಾಯಕ), ಗಿಲ್, ವಿರಾಟ್, ಶ್ರೇಯಸ್, ರಾಹುಲ್, ಹಾರ್ದಿಕ್, ಜಡೇಜಾ, ಅಕ್ಷರ್, ಕುಲ್ದೀಪ್/ವರುಣ್, ಹರ್ಷಿತ್, ಶಮಿ/ಅರ್ಶ್‌ದೀಪ್.ನ್ಯೂಜಿಲೆಂಡ್: ವಿಲ್ ಯಂಗ್, ಕಾನ್‌ವೇ, ವಿಲಿಯಮ್ಸನ್, ರಚಿನ್, ಲೇಥಮ್, ಫಿಲಿಪ್ಸ್, ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಹೆನ್ರಿ, ಜೇಮಿಸನ್, ಒರೌರ್ಕೆ
.ಪಂದ್ಯ: ಮಧ್ಯಾಹ್ನ 2.30ಕ್ಕೆಒಟ್ಟು ಮುಖಾಮುಖಿ: 118ಭಾರತ: 60ನ್ಯೂಜಿಲೆಂಡ್: 50ಟೈ: 01ಫಲಿತಾಂಶವಿಲ್ಲ: 07
ಪಿಚ್ ರಿಪೋರ್ಟ್
ದುಬೈ ಕ್ರೀಡಾಂಗಣದ ಪಿಚ್‌ನಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಕಡಿಮೆ. ಕಳೆದೆರಡೂ ಪಂದ್ಯಗಳಲ್ಲಿ ಭಾರತ ಚೇಸ್ ಮಾಡಿ ಗೆದ್ದಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಭಾರತ ಟಾಸ್ ಗೆದ್ದರೆ, ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆಯಿದೆ. ಸ್ಪಿನ್ನರ್‌ಗಳು ಮತ್ತೆ ಪ್ರಮುಖ ಪಾತ್ರವಹಿಸಬಹುದು.
300 ಏಕದಿನ ಪಂದ್ಯಗಳ ಮೈಲುಗಲ್ಲಿನತ್ತ ವಿರಾಟ್
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿದರೆ, ಏಕದಿನದಲ್ಲಿ 300 ಪಂದ್ಯ ಆಡಿದ ವಿಶೇಷ ದಾಖಲೆ ಬರೆಯಲಿದ್ದಾರೆ. ಅಲ್ಲದೆ, ಈ ಸಾಧನೆ ಮಾಡಿದ ಭಾರತದ 7ನೇ ಹಾಗೂ ವಿಶ್ವದ 22ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಭಾರತೀಯರ ಪೈಕಿ ಸಚಿನ್ 463, ಎಂ.ಎಸ್.ಧೋನಿ 347, ದ್ರಾವಿಡ್ 340, ಅಜರುದ್ಧೀನ್ 334, ಗಂಗೂಲಿ 308, ಯುವರಾಜ್ 301 ಪಂದ್ಯಗಳನ್ನಾಡಿದ್ದಾರೆ.