ಎಡವಟ್ಟಿನಲ್ಲೇ ಟೆಸ್ಟ್‌ ಸೋತ ಇಂಡಿಯಾ: 10 ಕ್ಯಾಚ್‌ ಡ್ರಾಪ್‌, ಕೊನೆ 72 ರನ್‌ಗೆ 13 ವಿಕೆಟ್‌ ನಷ್ಟ!

| N/A | Published : Jun 25 2025, 11:47 PM IST / Updated: Jun 26 2025, 07:23 AM IST

ಎಡವಟ್ಟಿನಲ್ಲೇ ಟೆಸ್ಟ್‌ ಸೋತ ಇಂಡಿಯಾ: 10 ಕ್ಯಾಚ್‌ ಡ್ರಾಪ್‌, ಕೊನೆ 72 ರನ್‌ಗೆ 13 ವಿಕೆಟ್‌ ನಷ್ಟ!
Share this Article
  • FB
  • TW
  • Linkdin
  • Email

ಸಾರಾಂಶ

ಆರಂಭಿಕ ಐವರಿಂದ 5 ಶತಕ, 721 ರನ್ । ಇತರರಿಂದ ಬರೀ 65. ಒಂದೇ ಪಂದ್ಯದಲ್ಲಿ ಕೈಚೆಲ್ಲಿದ ಕ್ಯಾಚ್‌ಗಳ ಸಂಖ್ಯೆ ಬರೋಬ್ಬರಿ 10. ಬೌಲಿಂಗ್‌ನಲ್ಲಿ ಬೂಮ್ರಾ ಹೊರತು ಬೇರ್ಯಾರೂ ಇಲ್ಲದಂತ ಸ್ಥಿತಿ

ಲೀಡ್ಸ್‌: ಹೊಸ ನಾಯಕನೊಂದಿಗೆ, ಹೊಸ ತಂಡವನ್ನು ಕಟ್ಟಿ, ಹೊಸ ಟೆಸ್ಟ್‌ ಚಾಂಪಿಯನ್‌ಶಿಪ್‌ಗಾಗಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ತನ್ನ ಎಡವಟ್ಟುಗಳಿಂದಲೇ ಸುದ್ದಿಯಾಗುತ್ತಿದೆ. ಒಂದೆರಡು ಎಡವಟ್ಟುಗಳು ಯಾವುದೇ ಪಂದ್ಯದಲ್ಲಾದರೂ ಸರ್ವೇಸಾಮಾನ್ಯ. ಆದರೆ ಒಂದು ಪಂದ್ಯದಲ್ಲೇ ಹತ್ತಿಪ್ಪತ್ತು ಎಡವಟ್ಟುಗಳಾದರೆ ಆ ತಂಡ ಸೋಲುವುದೇ ಲೇಸು. 

ತಂಡದ ನಾಲ್ವರು ಬ್ಯಾಟರ್‌ಗಳು 2 ಇನ್ನಿಂಗ್ಸ್‌ಗಳಲ್ಲಿ ದಾಖಲೆಯ 5 ಶತಕ ಬಾರಿಸಿದ ಹೊರತಾಗಿಯೂ ಭಾರತ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತಿದೆ. ಸೋಲಬಾರದ ಪಂದ್ಯದಲ್ಲಿ ಹೇಗೆ ಸೋಲಬೇಕು ಎಂದು ತೋರಿಸುವಂತಿತ್ತು ನೂತನ ನಾಯಕ ಶುಭ್‌ಮನ್‌ ಗಿಲ್‌ ಬಳಗದ ಪ್ರದರ್ಶನ. 

ಅಂದಹಾಗೆ ಭಾರತ ಈ ಪಂದ್ಯದಲ್ಲಿ ಮಾಡಿದ ಎಡವಟ್ಟುಗಳು ಒಂದೆರಡಲ್ಲ. ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 3 ವಿಕೆಟ್‌ಗೆ 430 ರನ್‌ ಗಳಿಸಿತ್ತು. ಆದರೆ ಶತಕ ವೀರ, ನಾಯಕ ಶುಭ್‌ಮನ್‌ ಗಿಲ್‌ ಔಟಾದ ಬಳಿಕ ಭಾರತ ತಂಡ ಕಂಡಿದ್ದು ಮಹಾಪತನ. ಕರುಣ್‌ ನಾಯರ್‌, ರವೀಂದ್ರ ಜಡೇಜಾ ವೈಫಲ್ಯದಿಂದಾಗಿ ತಂಡ ಬಳಿಕ ಕೇವಲ 41 ರನ್‌ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ ಕಳೆದುಕೊಂಡು ಆಲೌಟಾಯಿತು. 

ಫೀಲ್ಡಿಂಗ್‌ನಲ್ಲೂ ತಂಡ ಕಳಪೆ ಆಟವಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ತಂಡ ಬರೋಬ್ಬರಿ 6 ಕ್ಯಾಚ್‌ ಕೈಚೆಲ್ಲಿತು. ಯಶಸ್ವಿ ಜೈಸ್ವಾಲ್‌ 3 ಬಾರಿ ಕ್ಯಾಚ್‌ ಅವಕಾಶ ತಪ್ಪಿಸಿಕೊಂಡರು. ರವೀಂದ್ರ ಜಡೇಜಾ, ಸಾಯಿ ಸುದರ್ಶನ್‌ ಕೂಡಾ ಕ್ಯಾಚ್‌ ಪಡೆಯಲು ವಿಫಲರಾದರು. ಅಷ್ಟೇ ಅಲ್ಲದೆ, ತಾರಾ ಬ್ಯಾಟರ್‌ ಹ್ಯಾರಿ ಬ್ರೂಕ್‌ ಸೊನ್ನೆಗೆ ಔಟಾಗಬೇಕಿತ್ತು. ಬೂಮ್ರಾ ಎಸೆತದಲ್ಲಿ ಬ್ರೂಕ್‌ ಬ್ಯಾಟ್‌ಗೆ ತಾಗಿದ ಚೆಂಡು ಸಿರಾಜ್ ಕೈ ಸೇರಿತ್ತು. ಆದರೆ ಆ ಎಸೆತ ನೋಬಾಲ್‌ ಆಗಿತ್ತು. ಬಳಿಕ ಬ್ರೂಕ್‌ 99 ರನ್‌ ಗಳಿಸಿದರು. ಕ್ಯಾಚ್‌ ಡ್ರಾಪ್‌, ನೋಬಾಲ್‌ನಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 190ಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟಿತು. 34 ರನ್‌ಗಳು ಇತರೆ ರೂಪದಲ್ಲಿ ಇಂಗ್ಲೆಂಡ್‌ ತಂಡ ಖಾತೆ ಸೇರಿತು.

ನಿಲ್ಲದ ಎಡವಟ್ಟು: 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟರ್‌ಗಳು ಅಬ್ಬರಿಸಿದರು. ಕೆ.ಎಲ್‌.ರಾಹುಲ್‌ ಮೊದಲ ಇನ್ನಿಂಗ್ಸ್‌ನ ತಪ್ಪಿನಿಂದ ಎಚ್ಚೆತ್ತು ಶತಕ ಬಾರಿಸಿದರು. ರಿಷಭ್‌ ಪಂತ್‌ ಸತತ 2ನೇ ಇನ್ನಿಂಗ್ಸ್‌ನಲ್ಲೂ ಶತಕ ದಾಖಲಿಸಿದರು. 

ಆದರೆ ಇತರರ ಪ್ರದರ್ಶನ ತಂಡವನ್ನು ಸೋಲಿಸಲು ಬಂದಂತಿತ್ತು. ಒಂದು ಹಂತದಲ್ಲಿ 333 ರನ್‌ಗೆ ಕೇವಲ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 31 ರನ್‌ ಸೇರಿಸುವಷ್ಟರಲ್ಲಿ ಆಲೌಟಾಯಿತು. ಕರುಣ್‌ ನಾಯರ್‌, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌ ಮತ್ತೆ ವಿಫಲರಾದರು.ಇಂಗ್ಲೆಂಡ್‌ಗೆ ಭಾರತ 371 ರನ್‌ ಗುರಿ ನೀಡಿದರೂ, ಕಳಪೆ ಬೌಲಿಂಗ್‌ನಿಂದ ತಂಡಕ್ಕೆ ಹಿನ್ನಡೆಯುಂಟಾಯಿತು.

 ಡಕೆಟ್‌ 97 ರನ್‌ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್‌ ಕ್ಯಾಚ್ ಕೈಚೆಲ್ಲಿದರು. ಜಸ್‌ಪ್ರೀತ್‌ ಬೂಮ್ರಾ ಕೂಡಾ ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್‌ ಅವಕಾಶ ತಪ್ಪಿಸಿಕೊಂಡರು. ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಕೂಡಾ ಚುರುಕಾಗಿರಲಿಲ್ಲ. ಅವರು 2 ಬಾರಿ ಜಡೇಜಾ ಬೌಲಿಂಗ್‌ನಲ್ಲಿ ಕ್ಯಾಚ್‌ ಅವಕಾಶ ತಪ್ಪಿಸಿಕೊಂಡರು.ಇನ್ನು, ತಂಡದ ಬೌಲಿಂಗ್ ವಿಭಾಗವನ್ನು ಬೂಮ್ರಾ ಏಕಾಂಗಿಯಾಗಿ ಮುನ್ನಡೆಸುತ್ತಿದ್ದು, ಇತರ ಬೌಲರ್‌ಗಳು ದುಬಾರಿಯಾಗುವುದರ ಜೊತೆಗೆ ವಿಕೆಟ್‌ ಪಡೆಯಲೂ ಹೆಣಗಾಡುತ್ತಿದ್ದಾರೆ.

ಕರುಣ್ ಸೇರಿ ಕೊನೆ 6 ಮಂದಿ ಗಳಿಸಿದ ರನ್‌ 65

ಆರಂಭಿಕ ಆಟಗಾರರು ಉತ್ತಮವಾಗಿ ಆಡಿದರೂ, ಆಲ್ರೌಂಡರ್‌ಗಳು ಹಾಗೂ ತಜ್ಞ ಬೌಲರ್‌ಗಳು ಗಳಿಸುವ ಕೆಲವು ರನ್‌ಗಳು ಯಾವುದೇ ತಂಡಕ್ಕೆ ಅತ್ಯಮೂಲ್ಯ. ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ಸೇರಿ ವಿಶ್ವದ ಯಾವುದೇ ತಂಡವನ್ನು ಗಮನಿಸಿದರೂ ಅಲ್ಲಿ ಕೆಳ ಕ್ರಮಾಂಕದ ಆಟಗಾರರು ದೊಡ್ಡ ಮೊತ್ತ ಕಲೆಹಾಕಿದ ಉದಾಹರಣೆ ಇದೆ. ಆದರೆ ಭಾರತ ತಂಡದಲ್ಲಿ ಇದು ತೀರಾ ಅಪರೂಪ. 

ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಂತೂ ಭಾರತದ ಪ್ರದರ್ಶನ ಹೀನಾಯ. ಅಗ್ರ ಐವರು ಬ್ಯಾಟರ್‌ಗಳು ಮೊದಲ ಪಂದ್ಯದಲ್ಲಿ 5 ಶತಕ ಸೇರಿ 721 ರನ್‌ ಗಳಿಸಿದರೆ, ಕರುಣ್‌ ನಾಯರ್‌, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌ ಸೇರಿದಂತೆ ಕೆಳ ಕ್ರಮಾಂಕದ ಇತರ 6 ಮಂದಿ 2 ಇನ್ನಿಂಗ್ಸ್‌ಗಳಲ್ಲಿ ಬಾರಿಸಿದ ರನ್‌ ಬರೀ 65. ‘ಕೆಳ ಕ್ರಮಾಂಕದ ಬ್ಯಾಟರ್‌ಗಳನ್ನು 2 ಇನ್ನಿಂಗ್ಸ್‌ನಲ್ಲೂ ಬೇಗ ಔಟ್‌ ಮಾಡಿದ್ದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು’ ಎಂದು ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಹೇಳಿದ್ದಾರೆ.ಎಡವಟ್ಟು ಒಂದೆರಡಲ್ಲ...

1. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 3 ವಿಕೆಟ್‌ಗೆ 430 ರನ್‌. ಬಳಿಕ 41 ರನ್‌ಗೆ ಉಳಿದ 7 ವಿಕೆಟ್‌ ಪತನ.

2. ಫೀಲ್ಡಿಂಗ್‌ನಲ್ಲೂ ಕಳಪೆ ಪ್ರದರ್ಶನ. ಮೊದಲ ಇನ್ನಿಂಗ್ಸ್‌ನಲ್ಲಿ ಆರು ಕ್ಯಾಚ್‌ ಕೈಚೆಲ್ಲಿದ ಟೀಂ ಇಂಡಿಯಾ.3. ಹ್ಯಾರಿ ಬ್ರೂಕ್‌ ಸೊನ್ನೆಗೆ ಔಟಾಗಬೇಕಿತ್ತು. ಬೂಮ್ರಾ ಎಸೆತದಲ್ಲಿ ಬ್ರೂಕ್‌ ಬ್ಯಾಟ್‌ಗೆ ತಾಗಿದ ಚೆಂಡು ಸಿರಾಜ್ ಕೈ ಸೇರಿತ್ತು. ಆದರೆ ಆ ಎಸೆತ ನೋಬಾಲ್‌ ಆಗಿತ್ತು. ಬಳಿಕ ಬ್ರೂಕ್‌ 99 ರನ್‌ ಗಳಿಸಿದರು.

4. ಕ್ಯಾಚ್‌ ಡ್ರಾಪ್‌, ನೋಬಾಲ್‌ನಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 190ಕ್ಕೂ ಹೆಚ್ಚು ರನ್‌ ಬಿಟ್ಟುಕೊಟ್ಟಿತು.5. 2ನೇ ಇನ್ನಿಂಗ್ಸ್‌ನಲ್ಲೂ ಭಾರತ ಕುಸಿತ. 4 ವಿಕೆಟ್‌ಗೆ 333 ರನ್‌ ಗಳಿಸಿದ್ದ ತಂಡ ಬಳಿಕ 31 ರನ್‌ ಸೇರಿಸುವಷ್ಟರಲ್ಲಿ ಆಲೌಟ್‌.

6. ಮತ್ತೆ ಭಾರತ ಕಳಪೆ ಫೀಲ್ಡಿಂಗ್‌. ಡಕೆಟ್‌ 97 ರನ್‌ ಗಳಿಸಿದ್ದಾಗ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್‌.7. ಜಡೇಜಾ ಬೌಲಿಂಗ್‌ನಲ್ಲಿ 2 ಬಾರಿ ಕ್ಯಾಚ್‌ ಅವಕಾಶ ತಪ್ಪಿಸಿಕೊಂಡ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌.

ನಾಯಕ ಗಿಲ್‌ಗೆ ಇಲ್ಲ ಯಶಸ್ವಿ ಡಿಆರ್‌ಎಸ್‌: 6 ಬಾರಿಯೂ ವ್ಯರ್ಥ!

ನಾಯಕನಾಗಿ ಮೊದಲ ಬಾರಿ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದ ಶುಭ್‌ಮನ್‌ ಗಿಲ್‌ ಡಿಆರ್‌ಎಸ್‌(ಅಂಪೈರ್‌ ತೀರ್ಪು ಮರುಪರಿಶೀಲನಾ ನಿಯಮ) ತೆಗೆದುಕೊಳ್ಳುವುದರಲ್ಲಿ ವಿಫಲರಾದರು. ಅವರು 2 ಇನ್ನಿಂಗ್ಸ್‌ಗಳಲ್ಲಿ ಒಟ್ಟು 6 ಬಾರಿ ಡಿಆರ್‌ಎಸ್‌ ಮೊರೆ ಹೋದರು. ಆದರೆ ಒಮ್ಮೆಯೂ ತೀರ್ಪು ಭಾರತ ತಂಡದ ಪರ ಬರಲಿಲ್ಲ.

ಮೈದಾನದಲ್ಲೇ ಜೈಸ್ವಾಲ್‌ ಡ್ಯಾನ್ಸ್‌: ಭಾರೀ ಆಕ್ರೋಶ

ಜೈಸ್ವಾಲ್‌ ಮೊದಲ ಇನ್ನಿಂಗ್ಸ್‌ನಲ್ಲಿ 3 ಹಾಗೂ 2ನೇ ಇನ್ನಿಂಗ್ಸ್‌ನಲ್ಲಿ ಒಂದು ಕ್ಯಾಚ್‌ ಕೈಚೆಲ್ಲಿದ್ದಾರೆ. ಫೀಲ್ಡಿಂಗ್‌ ವೈಫಲ್ಯದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ನಡುವಯೇ, ಜೈಸ್ವಾಲ್‌ ಮೈದಾನದಲ್ಲಿ ನಡೆದುಕೊಂಡ ರೀತಿಯಿಂದಲೂ ಸಾಮಾಜಿಕ ತಾಣಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇಂಗ್ಲೆಂಡ್‌ ಗೆಲುವಿಗೆ 44 ರನ್‌ ಬೇಕಿದ್ದಾಗ ಬೌಂಡರಿ ಲೈನ್‌ ಬಳಿ ಇದ್ದ ಜೈಸ್ವಾಲ್‌, ಇಂಗ್ಲೆಂಡ್‌ ಅಭಿಮಾನಿಗಳನ್ನು ರಂಜಿಸಲು ನಗುತ್ತಲೇ ಡ್ಯಾನ್ಸ್‌ ಮಾಡಿದ್ದಾರೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

Read more Articles on