ಐಸಿಸಿ ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ. ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿರುವ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ. ಫೆ.7ರಿಂದ ಮಾ.8ರ ವರೆಗೂ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌

ಮುಂಬೈ: 2026ರ ಟಿ20 ವಿಶ್ವಕಪ್‌ನ ವೇಳಾಪಟ್ಟಿಯನ್ನು ಮಂಗಳವಾರ ಐಸಿಸಿ ಪ್ರಕಟಿಸಿತು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಸಿಸಿ ಅಧ್ಯಕ್ಷ ಜಯ್‌ ಶಾ, ಗುಂಪುಗಳು ಹಾಗೂ ವೇಳಾಪಟ್ಟಿ ಘೋಷಿಸಿದರು. 20 ತಂಡಗಳು ಪಾಲ್ಗೊಳ್ಳಲಿರುವ ಟೂರ್ನಿಯು ಫೆ.7ರಿಂದ ಮಾ.8ರ ವರೆಗೂ ನಡೆಯಲಿದ್ದು, ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ನೀಡಲಿವೆ. ಭಾರತದ 5 ಹಾಗೂ ಲಂಕಾದ 3 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.

ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಫೆ.15ರಂದು ಕೊಲಂಬೊದಲ್ಲಿ ಪರಸ್ಪರ ಎದುರಾಗಲಿವೆ. ಪಾಕಿಸ್ತಾನ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

ಭಾರತ ತನ್ನ ಮೊದಲ ಪಂದ್ಯವನ್ನು ಫೆ.7ರಂದು ಅಮೆರಿಕ ವಿರುದ್ಧ ಮುಂಬೈನಲ್ಲಿ ಆಡಲಿದೆ. ಬಳಿಕ ಫೆ.12ರಂದು ದೆಹಲಿಯಲ್ಲಿ ನಮೀಬಿಯಾವನ್ನು ಎದುರಿಸಲಿದೆ. ಅಲ್ಲಿಂದ ಕೊಲಂಬೊಗೆ ತೆರಳಿ ಫೆ.15ರಂದು ಪಾಕ್‌ ವಿರುದ್ಧ ಆಡಲಿರುವ ಭಾರತ, ಗುಂಪು ಹಂತದ ಕೊನೆಯ ಪಂದ್ಯವನ್ನು ಫೆ.18ರಂದು ನೆದರ್‌ಲೆಂಡ್ಸ್‌ ವಿರುದ್ಧ ಅಹಮದಾಬಾದ್‌ನಲ್ಲಿ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿದ್ದು, ಗುಂಪು ಹಂತದಲ್ಲಿ ಪ್ರತಿ ದಿನ 3 ಪಂದ್ಯಗಳು ಇರಲಿವೆ. ಸೂಪರ್‌-8 ಹಂತದಿಂದ ದಿನಕ್ಕೆ 2 ಪಂದ್ಯ ಇರಲಿದೆ. ಪಾಕಿಸ್ತಾನ ಫೈನಲ್‌ ಪ್ರವೇಶಿಸದೆ ಇದ್ದರೆ, ಪ್ರಶಸ್ತಿ ಸುತ್ತಿನ ಸೆಣಸಾಟಕ್ಕೆ ಅಹಮದಾಬಾದ್ ವೇದಿಕೆಯಾಗಲಿದೆ. ಪಾಕ್‌ ಫೈನಲ್‌ಗೇರಿದರೆ, ಆಗ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ.