ಇಂಗ್ಲೆಂಡ್‌ನ ಯುವ ಸ್ಪಿನ್ನರ್‌ಗಳ ದಾಳಿಗೆ ಟೀಂ ಇಂಡಿಯಾ ಕಂಗಾಲು!

| Published : Feb 25 2024, 01:48 AM IST / Updated: Feb 25 2024, 05:38 AM IST

ಸಾರಾಂಶ

ಅನಿರೀಕ್ಷಿತ ಬೌನ್ಸ್‌ ಹಾಗೂ ತಿರುವು ಕಂಡುಬಂದ ರಾಂಚಿ ಪಿಚ್‌ನಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್‌ಗಳ ಮಾರಕ ದಾಳಿಗೆ ಟೀಂ ಇಂಡಿಯಾ ಅಕ್ಷರಶಃ ತತ್ತರಿಸಿದೆ.

ರಾಂಚಿ: ಅನಿರೀಕ್ಷಿತ ಬೌನ್ಸ್‌ ಹಾಗೂ ತಿರುವು ಕಂಡುಬಂದ ರಾಂಚಿ ಪಿಚ್‌ನಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್‌ಗಳ ಮಾರಕ ದಾಳಿಗೆ ಟೀಂ ಇಂಡಿಯಾ ಅಕ್ಷರಶಃ ತತ್ತರಿಸಿದೆ. 

ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ ಕಲೆಹಾಕಿದ್ದು 353 ರನ್‌. ಆದರೆ ಭಾರತೀಯ ಬ್ಯಾಟರ್ಸ್‌ಗೆ ಇಂಗ್ಲೆಂಡ್‌ನ ಅನನುಭವಿ ಸ್ಪಿನ್‌ ದಾಳಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ. 

ಪರಿಣಾಮ ಭಾರತ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 219 ರನ್‌ ಗಳಿಸಿ ಸಂಕಷ್ಟದಲ್ಲಿದೆ. ತಂಡ ಇನ್ನೂ 134 ರನ್‌ ಹಿನ್ನಡೆಯಲ್ಲಿದ್ದು, ಭಾನುವಾರದ ಮೊದಲ ಅವಧಿ ಪಂದ್ಯದ ಫಲಿತಾಂಶ ನಿರ್ಧರಿಸುವ ಸಾಧ್ಯತೆಯಿದೆ.

ಮೊದಲ ದಿನ 7 ವಿಕೆಟ್‌ಗೆ 302 ರನ್‌ ಗಳಿಸಿದ್ದ ಇಂಗ್ಲೆಂಡ್‌ಗೆ ಶನಿವಾರವೂ ಜೋ ರೂಟ್‌-ಓಲಿ ರಾಬಿನ್ಸನ್‌ ಜೊತೆಯಾಟ ನೆರವಾಯಿತು. ಇವರಿಬ್ಬರು 8ನೇ ವಿಕೆಟ್‌ಗೆ 102 ರನ್‌ ಸೇರಿಸಿದರು. 

ರಾಬಿನ್ಸನ್‌ 58 ರನ್‌ ಗಳಿಸಿದರೆ, 122 ರನ್‌ ಸಿಡಿಸಿದ ರೂಟ್‌ ಔಟಾಗದೆ ಉಳಿದರು. ಕೊನೆ ಮೂವರನ್ನು ಪೆವಿಲಿಯನ್‌ಗೆ ಅಟ್ಟಿದ ಜಡೇಜಾ ಒಟ್ಟು 4 ವಿಕೆಟ್‌ ಪಡೆದರು.

ಬ್ಯಾಟಿಂಗ್‌ ವೈಫಲ್ಯ: ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಭಾರತಕ್ಕೆ 3ನೇ ಓವರಲ್ಲೇ ಆಘಾತ ಎದುರಾಯಿತು. ನಾಯಕ ರೋಹಿತ್‌ 2 ರನ್‌ಗೆ ಔಟಾದರು.

ಆದರೆ 2ನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್‌-ಶುಭ್‌ಮನ್‌ ಗಿಲ್‌ 82 ರನ್‌ ಜೊತೆಯಾಟವಾಡಿ ಭಾರತವನ್ನು ಕಾಪಾಡಿದರು. 38 ರನ್‌ ಗಳಿಸಿದ್ದಾಗ ಗಿಲ್‌ ಔಟಾಗುವುದರೊಂದಿಗೆ ಭಾರತದ ಪತನ ಆರಂಭವಾಯಿತು.

 86ಕ್ಕೆ 1 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 91 ರನ್ ಸೇರಿಸುವಷ್ಟರಲ್ಲಿ ಇನ್ನೂ 6 ವಿಕೆಟ್‌ ನಷ್ಟಕ್ಕೊಳಗಾಯಿತು.

ರಜತ್‌ ಪಾಟೀದಾರ್‌(17), ಜಡೇಜಾ(12), ಸರ್ಫರಾಜ್‌ ಖಾನ್‌(14), ಆರ್‌.ಅಶ್ವಿನ್‌(01) ಯಾರಿಂದಲೂ ದೊಡ್ಡ ಇನ್ನಿಂಗ್ಸ್‌ ಮೂಡಿಬರಲಿಲ್ಲ.

ಮತ್ತೊಂದು ಆಕರ್ಷಕ ಇನ್ನಿಂಗ್ಸ್‌ ಕಟ್ಟಿದ ಜೈಸ್ವಾಲ್ 73 ರನ್‌ ಗಳಿಸಿದ್ದಾಗ ಬಶೀರ್‌ ಎಸೆತದಲ್ಲಿ ಬೌಲ್ಡ್‌ ಆಗಿ ನಿರ್ಗಮಿಸಿದರು. ಬಳಿಕ 8ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡಿರುವ ಧೃವ್‌ ಜುರೆಲ್‌ ಹಾಗೂ ಕುಲ್ದೀಪ್‌ ಯಾದವ್‌ ದಿಟ್ಟ ಹೋರಾಟ ನಡೆಸುತ್ತಿದ್ದು, 42 ರನ್‌ ಜೊತೆಯಾಟವಾಡಿದ್ದಾರೆ.

ಧೃವ್‌ 30, ಕುಲ್ದೀಪ್‌ 17 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದು, ಇನ್ನಿಂಗ್ಸ್‌ ಮುನ್ನಡೆ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.ಕೇವಲ 2ನೇ ಪಂದ್ಯವಾಡುತ್ತಿರುವ ಶೋಯೆಬ್‌ ಬಶೀರ್‌ 84 ರನ್‌ಗೆ 4 ವಿಕೆಟ್‌ ಕಬಳಿಸಿದ್ದು, ಟಾಮ್‌ ಹಾರ್ಟ್ಲಿ 2 ವಿಕೆಟ್ ಪಡೆದಿದ್ದಾರೆ.

ಸ್ಕೋರ್‌: ಇಂಗ್ಲೆಂಡ್‌ 353/3 (ರೂಟ್‌ 122*, ರಾಬಿನ್ಸನ್‌ 58, ಜಡೇಜಾ 4-67, ಆಕಾಶ್‌ 3-83), ಭಾರತ 219/7(2ನೇ ದಿನದಂತ್ಯಕ್ಕೆ)(ಜೈಸ್ವಾಲ್‌ 73, ಗಿಲ್‌ 38, ಧೃವ್‌ 30*, ಬಶೀರ್‌ 4-84)

05ನೇ ಭಾರತೀಯ: ಟೆಸ್ಟ್‌ ಸರಣಿಯೊಂದರಲ್ಲಿ 600+ ರನ್‌ ಗಳಿಸಿದ 5ನೇ ಭಾರತೀಯ ಜೈಸ್ವಾಲ್‌. ಸುನಿಲ್ ಗವಾಸ್ಕರ್‌, ಕೊಹ್ಲಿ, ದ್ರಾವಿಡ್‌, ದಿಲೀಪ್‌ ಸರ್ದೇಸಾಯಿ ಇತರ ಸಾಧಕರು.

ಸತತ 31 ಓವರ್‌ ಎಸೆದ 20ರ ಬಶೀರ್

ಪಂದ್ಯದಲ್ಲಿ ಭಾರತವನ್ನು ಇನ್ನಿಲ್ಲದಂತೆ ಕಾಡಿದ ಯುವ ಸ್ಪಿನ್ನರ್ ಬಶೀರ್‌, ತಮ್ಮ ಮ್ಯಾರಥಾನ್‌ ಸ್ಪೆಲ್‌ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. 9ನೇ ಓವರ್‌ ವೇಳೆ ದಾಳಿಗಿಳಿದ ಬಶೀರ್‌ ಸತತವಾಗಿ 31 ಓವರ್‌ ಬೌಲ್‌ ಮಾಡಿದರು. 

ವೇಗಿಗಳು ಸತತವಾಗಿ 8-10 ಓವರ್‌, ಸ್ಪಿನ್ನರ್‌ಗಳು 10-15 ಓವರ್‌ ಬೌಲ್‌ ಮಾಡುವುದು ಸಹಜ. ಆದರೆ ಬಶೀರ್‌ 2 ಅವಧಿಗಳಲ್ಲಿ ಸತತ 31 ಓವರ್‌ ಬೌಲ್‌ ಮಾಡಿ, ನಾಲ್ವರು ಪ್ರಮುಖ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು.