ಸಾರಾಂಶ
ಪ್ಯಾರಿಸ್: ಈ ಸಲ ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ಗಾಗಿ ಪ್ಯಾರಿಸ್ ವಿಮಾನವೇರುವ ಮುನ್ನ ಇದ್ದ ಗುರಿ 25 ಪದಕ ಗೆಲ್ಲುವುವು. ಅದನ್ನು ಕ್ರೀಡಾಕೂಟ ಮುಕ್ತಾಯಗೊಳ್ಳುವ 3 ದಿನಗಳ ಮೊದಲೇ ಸಾಧಿಸಿದ್ದಾರೆ.
ಈಗಾಗಲೇ ಕ್ರೀಡಾಕೂಟದ ಇತಿಹಾಸದಲ್ಲೇ ಸಾರ್ವಕಾಲಿಕ ಶ್ರೇಷ್ಠ ಪದಕದ ಸಾಧನೆ ಮಾಡಿದ್ದ ಭಾರತ, ಗುರುವಾರ 25 ಪದಕಗಳ ಮೈಲುಗಲ್ಲು ಸಾಧಿಸಿತು.ಬುಧವಾರ ರಾತ್ರಿ ಭಾರತ ಆರ್ಚರಿಯಲ್ಲಿ ಚೊಚ್ಚಲ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಬಳಿಕ ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಇಬ್ಬರು ಕ್ರೀಡಾಟಟುಗಳು ಪದಕ ಕೊರಳಿಗೇರಿಸಿಕೊಳ್ಳುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದರು.
ಗುರುವಾರ ಭಾರತ ಮತ್ತೊಂದು ಪದಕ ತನ್ನದಾಗಿಸಿಕೊಂಡಿತು. ಜುಡೋ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು ಲಭಿಸಿತು. ಈ ಮೂಲಕ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಜುಡೋ ಸ್ಪರ್ಧೆಯಲ್ಲಿ ಚೊಚ್ಚಲ ಪದಕ ಗೆದ್ದ ಸಾಧನೆ ಮಾಡಿತು. ಭಾರತ ಕ್ರೀಡಾಕೂಟದಲ್ಲಿ ಈವರೆಗೂ 5 ಚಿನ್ನ, 9 ಬೆಳ್ಳಿ ಹಾಗೂ 11 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
ಪದಕ ಪಟ್ಟಿಯಲ್ಲಿ ಸದ್ಯ 14ನೇ ಸ್ಥಾನದಲ್ಲಿದೆ. ಭಾರತಕ್ಕೆ ಇನ್ನೂ ಕೆಲ ಸ್ಪರ್ಧೆಗಳು ಬಾಕಿಯಿದ್ದು, ಮತ್ತಷ್ಟು ಪದಕ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಅಗ್ರ-10ಕ್ಕೇರುವ ಗುರಿ ಇಟ್ಟುಕೊಂಡಿದೆ.