ಸಾರಾಂಶ
ನಿಶಾಂತ್ ದೇವ್ ಸೆಮೀಸ್‌ಗೇರಿದರೆ ಒಲಿಂಪಿಕ್ಸ್ ಟಿಕೆಟ್ ಸಿಗಲಿದೆ. ಈ ಬಾರಿ ಒಲಿಂಪಿಕ್ಸ್ ಪ್ರವೇಶಿಸಿದ ಮೊದಲ ಪುರುಷರ ಬಾಕ್ಸರ್ ಎಂಬ ಖ್ಯಾತಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಬುಸ್ಟೊ ಅರ್ಸಿಜಿಯೊ(ಇಟಲಿ): ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ, ಭಾರತದ ತಾರಾ ಬಾಕ್ಸರ್ ನಿಶಾಂತ್ ದೇವ್‌ಗೆ ಪ್ಯಾರಿಸ್ ಒಲಿಂಪಿಕ್ಸ್ ಪ್ರವೇಶ ಪಡೆಯಲು ಇನ್ನೊಂದೇ ಗೆಲುವು ಅಗತ್ಯವಿದೆ. ಅವರು ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸೆಮೀಸ್‌ಗೇರಿದರೆ ಒಲಿಂಪಿಕ್ಸ್ ಟಿಕೆಟ್ ಸಿಗಲಿದೆ.
23 ವರ್ಷದ ನಿಶಾಂತ್ ಭಾನುವಾರ ರಾತ್ರಿ ನಡೆದ ಪುರುಷರ 71 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಗ್ರೀಸ್‌ನ ಕ್ರಿಸ್ಟೋಸ್ ಕರೈಟಿಸ್ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದರು. ಈ ವಿಭಾಗದಲ್ಲಿ ಅಗ್ರ-4 ಬಾಕ್ಸರ್‌ಗಳು ಒಲಿಂಪಿಕ್ಸ್ ಪ್ರವೇಶಿಸಲಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದರೂ ಒಲಿಂಪಿಕ್ಸ್ ಟಿಕೆಟ್ ಸಿಗಲಿದೆ.ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ಏಷ್ಯನ್ ಗೇಮ್ಸ್‌ನಲ್ಲಿ ಗೆಲ್ಲುವ ಮೂಲಕ ಒಲಿಂಪಿಕ್ಸ್ ಪ್ರವೇಶಿಸಿದ್ದಾರೆ. ನಿಶಾಂತ್ ಈ ಬಾರಿ ಒಲಿಂಪಿಕ್ಸ್ ಪ್ರವೇಶಿಸಿದ ಮೊದಲ ಪುರುಷರ ಬಾಕ್ಸರ್ ಎಂಬ ಖ್ಯಾತಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.