ಭಾರತ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 5 ಶತಕಕ್ಕೆ ಸಾಕ್ಷಿಯಾಗಿದೆ.

ಲೀಡ್ಸ್‌: ಭಾರತ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 5 ಶತಕಕ್ಕೆ ಸಾಕ್ಷಿಯಾಗಿದೆ. ಇದು ಜಂಟಿ ವಿಶ್ವ ದಾಖಲೆ ಕೂಡ ಹೌದು. ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮೂವರು, 2ನೇ ಇನ್ನಿಂಗ್ಸ್‌ನಲ್ಲಿ ಇಬ್ಬರು ಶತಕ ಸಿಡಿಸಿದರು.

ಮೊದಲ ಇನ್ನಿಂಗ್ಸಲ್ಲಿ ಜೈಸ್ವಾಲ್‌ 101, ಗಿಲ್‌ 147, ಪಂತ್‌ 134 ರನ್‌ ಗಳಿಸಿದರು. 2ನೇ ಇನ್ನಿಂಗ್ಸಲ್ಲಿ ರಾಹುಲ್‌ 137, ಪಂತ್‌ 118 ರನ್‌ ದಾಖಲಿಸಿದರು. ಭಾರತ ಇದಕ್ಕೂ ಮುನ್ನ 4 ಬಾರಿ ಪಂದ್ಯದಲ್ಲಿ 4 ಶತಕಗಳನ್ನು ದಾಖಲಿಸಿತ್ತು. 2007ರಲ್ಲಿ ಬಾಂಗ್ಲಾ ವಿರುದ್ಧ ಮೀರ್‌ಪುರ್‌ನಲ್ಲಿ, 2009ರಲ್ಲಿ ಶ್ರೀಲಂಕಾ ವಿರುದ್ಧ ಅಹಮದಾಬಾದ್‌ನಲ್ಲಿ, 2010ರಲ್ಲಿ ದ.ಆಫ್ರಿಕಾ ವಿರುದ್ಧ ಕೋಲ್ಕತಾದಲ್ಲಿ ಹಾಗೂ 2017ರಲ್ಲಿ ಶ್ರೀಲಂಕಾ ವಿರುದ್ಧ ನಾಗ್ಪುರದಲ್ಲಿ ಭಾರತ 4 ಶತಕಗಳನ್ನು ದಾಖಲಿಸಿತ್ತು.

ಭಾರತಕ್ಕೂ ಮೊದಲು ವಿಂಡೀಸ್‌ ವಿರುದ್ಧ 1955ರಲ್ಲಿ ಆಸ್ಟ್ರೇಲಿಯಾ, 2001ರಲ್ಲಿ ಬಾಂಗ್ಲಾ ವಿರುದ್ಧ ಪಾಕಿಸ್ತಾನ, 2007ರಲ್ಲಿ ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌, 2013ರಲ್ಲಿ ಬಾಂಗ್ಲಾ ವಿರುದ್ಧ ಲಂಕಾ, 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಪಂದ್ಯವೊಂದರಲ್ಲಿ 5 ಶತಕ ದಾಖಲಿಸಿದ್ದವು.