ಸಾರಾಂಶ
ಚೆನ್ನೈ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 12 ರನ್ ಸೋಲನುಭವಿಸಿದೆ. ಏಕದಿನ ಸರಣಿಯಲ್ಲಿ ಪ್ರವಾಸಿ ತಂಡದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಟೀಂ ಇಂಡಿಯಾ, ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿದ ಹೊರತಾಗಿಯೂ ಸೋಲುಂಡಿತು.
ಶುಕ್ರವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದ.ಆಫ್ರಿಕಾ 4 ವಿಕೆಟ್‌ಗೆ 189 ರನ್ ಕಲೆಹಾಕಿತು. ತಾಜ್ಮಿನ್ ಬ್ರಿಟ್ಸ್ 56 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್‌ನೊಂದಿಗೆ 81 ರನ್ ಸಿಡಿಸಿದರೆ, ಮಾರಿಯಾನೆ ಕಾಪ್ 33 ಎಸೆತಗಳಲ್ಲಿ 57, ನಾಯಕಿ ವೊಲ್ವಾರ್ಟ್ 33 ರನ್ ಸಿಡಿಸಿದರು.
ಭಾರತದ ಪರ ಪೂಜಾ ವಸ್ತ್ರಾಕರ್ ಹಾಗೂ ರಾಧಾ ಯಾದವ್ ತಲಾ 2 ವಿಕೆಟ್ ಕಿತ್ತರು.ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ, ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗ್ಸ್ ಹೋರಾಟದ ಹೊರತಾಗಿಯೂ 4 ವಿಕೆಟ್‌ಗೆ 177 ರನ್ ಕಲೆಹಾಕಿ ಸೋಲೊಪ್ಪಿಕೊಂಡಿತು.
ಆರಂಭಿಕ ಆಟಗಾರ್ತಿ ಸ್ಮೃತಿ 30 ಎಸೆತಗಳಲ್ಲಿ 46 ರನ್ ಸಿಡಿಸಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಆದರೆ ಹೇಮಲತಾ 14 ರನ್ ಗಳಿಸಲು 17 ಎಸೆತ ತೆಗೆದುಕೊಂಡರು. ಕೊನೆಯಲ್ಲಿ ಅಬ್ಬರಿಸಿದ ಜೆಮಿಮಾ(30 ಎಸೆತಗಳಲ್ಲಿ ಔಟಾಗದೆ 53) ಹಾಗೂ ಹರ್ಮನ್‌ಪ್ರೀತ್ ಕೌರ್(35) 4ನೇ ವಿಕೆಟ್‌ಗೆ 59 ಎಸೆತಗಳಲ್ಲಿ 90 ರನ್ ಜೊತೆಯಾಟವಾಡಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. 2ನೇ ಪಂದ್ಯ ಭಾನುವಾರ ನಡೆಯಲಿದೆ.
ಸ್ಕೋರ್: ದ.ಆಫ್ರಿಕಾ 20 ಓವರಲ್ಲಿ 189/4 (ತಾಜ್ಮಿನ್ 81, ಮಾರಿಯಾನೆ 57, ಪೂಜಾ 2-23), ಭಾರತ 20 ಓವರಲ್ಲಿ 177/4 (ಜೆಮಿಮಾ 53*, ಸ್ಮೃತಿ 46, ಕ್ಲೆರ್ಕ್ 1-30)