ಸಾರಾಂಶ
ನವದೆಹಲಿ: ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡದ ಜೊತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮೂಲಕ ಮಾತನಾಡಿ, ಅಭಿನಂದನೆ ಸಲ್ಲಿಸಿದರು.
ಭಾನುವಾರ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಮೋದಿ ಕರೆ ಮಾಡಿ ಮಾತನಾಡಿದರು. ಈ ಮೂವರ ಜೊತೆ ಮಾತನಾಡುತ್ತಿರುವ ದೃಶ್ಯಗಳಿರುವ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಮೋದಿ ಅವರು ಹಂಚಿಕೊಂಡಿದ್ದು,
‘ಭಾರತೀಯ ಕ್ರಿಕೆಟ್ ತಂಡದೊಂದಿಗೆ ಮಾತನಾಡಿ, ಟಿ20 ವಿಶ್ವಕಪ್‌ನಲ್ಲಿ ಅವರ ಅನುಕರಣೀಯ ಯಶಸ್ಸಿಗಾಗಿ ಅಭಿನಂದಿಸಿದೆ. ಪಂದ್ಯಾವಳಿಯಲ್ಲಿ ಅವರು ಅತ್ಯುತ್ತಮ ಕೌಶಲ್ಯ ಮತ್ತು ಉತ್ಸಾಹವನ್ನು ತೋರಿಸಿದ್ದಾರೆ. ಪ್ರತಿಯೊಬ್ಬ ಆಟಗಾರನ ಬದ್ಧತೆ ತುಂಬಾ ಸ್ಫೂರ್ತಿದಾಯಕವಾಗಿದೆ’ ಎಂದು ಬರೆದಿದ್ದಾರೆ.
ಕೊಹ್ಲಿ, ರೋಹಿತ್ ಕೊಡುಗೆಗೆ ಕ್ರಿಕೆಟ್ ಜಗತ್ತು ಶ್ಲಾಘನೆ
ನವದೆಹಲಿ: ಟಿ20 ವಿಶ್ವಕಪ್ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಕೋರಿದ ಭಾರತದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಲೋಕ ಶುಭ ಹಾರೈಸಿದ್ದು, ಭಾರತೀಯ ಕ್ರಿಕೆಟ್‌ಗೆ ಇಬ್ಬರು ದಿಗ್ಗಜರು ನೀಡಿದ ಕೊಡುಗೆಯನ್ನು ಶ್ಲಾಘಿಸಿದೆ.ಭಾರತದ ಮುಂದಿನ ಕೋಚ್ ಎಂದೇ ಕರೆಸಿಕೊಳ್ಳುವ ಗೌತಮ್ ಗಂಭೀರ್, ‘ಕೊಹ್ಲಿ, ರೋಹಿತ್ ವಿಶ್ವಕಪ್ ಗೆಲುವಿನೊಂದಿಗೆ ನಿವೃತ್ತಿ ಘೋಷಿಸಿದ್ದಾರೆ.
ಇಬ್ಬರೂ ಶ್ರೇಷ್ಠ ಆಟಗಾರರು. ಭಾರತ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆ ಅಪಾರ’ ಎಂದಿದ್ದಾರೆ. ‘ಕ್ರಿಕೆಟ್ ದೇವರು’ ಖ್ಯಾತಿಯ ಸಚಿನ್ ತೆಂಡುಲ್ಕರ್ ಕೂಡಾ ಎಕ್ಸ್ ಖಾತೆಯಲ್ಲಿ ಸಂದೇಶ ರವಾನಿಸಿದ್ದಾರೆ. ‘ಪ್ರತಿಭಾವಂತ ಕ್ರಿಕೆಟಿಗನಿಂದ ವಿಶ್ವಕಪ್ ವಿಜೇತ ನಾಯಕನಾಗುವವರೆಗೂ ರೋಹಿತ್‌ರ ಆಟ ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಬದ್ಧತೆ ಮತ್ತು ಅಸಾಧಾರಣ ಪ್ರತಿಭೆ ದೇಶಕ್ಕೆ ಹೆಮ್ಮೆ ತಂದಿದೆ’ ಎಂದಿದ್ದಾರೆ. ಅಲ್ಲದೆ ಕೊಹ್ಲಿಯನ್ನು ನಿಜವಾದ ಚಾಂಪಿಯನ್ ಎಂದು ಬಣ್ಣಿಸಿದ್ದಾರೆ.
ವೆಸ್ಟ್‌ಇಂಡೀಸ್ ದಿಗ್ಗಜ ಇಯಾನ್ ಬಿಷಪ್, ಪಾಕಿಸ್ತಾನದ ಶೋಯೆಬ್ ಅಖ್ತರ್ ಸೇರಿದಂತೆ ಹಾಲಿ, ಮಾಜಿ ಕ್ರಿಕೆಟಿಗರು ಕೂಡಾ ಕೊಹ್ಲಿ, ರೋಹಿತ್‌ಗೆ ಶುಭ ಹಾರೈಸಿದ್ದಾರೆ.ಭಾರತದಲ್ಲಿ ಅಪಾರ ಪ್ರಮಾಣದ ಯುವ ಕ್ರಿಕೆಟಿಗರಿದ್ದಾರೆ.
ಐಪಿಎಲ್ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬರುತ್ತಿರುತ್ತಾರೆ. ಆದರೆ ಕೊಹ್ಲಿ, ರೋಹಿತ್‌ರ ಅನುಪಸ್ಥಿತಿ ಭಾರತ ತಂಡಕ್ಕೆ ಬಹಳ ದಿನ ಕಾಡಲಿದೆ. ಭಾರತೀಯ ಕ್ರಿಕೆಟ್‌ಗೆ ಅವರಿಬ್ಬರ ಕೊಡುಗೆ ಅಪಾರ
.-ರೋಜರ್ ಬಿನ್ನಿ, ಬಿಸಿಸಿಐ ಅಧ್ಯಕ್ಷ