ಸಾರಾಂಶ
ನವದೆಹಲಿ: ಜುಲೈ 27ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡ ಪ್ರಕಟ ವಿಳಂಬವಾಗಿದೆ. ವರದಿಗಳ ಪ್ರಕಾರ ಬುಧವಾರ ಬಿಸಿಸಿಐ ಎರಡೂ ಸರಣಿಗೆ ತಂಡ ಘೋಷಿಸಬೇಕಿತ್ತು.
ಆದರೆ ಆಯ್ಕೆ ಸಮಿತಿ ಸಭೆ ಮುಂದೂಡಿಕೆಯಾದ ಕಾರಣ ತಂಡ ಪ್ರಕಟ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ.ವರದಿಗಳ ಪ್ರಕಾರ ಬುಧವಾರ ಆಯ್ಕೆ ಸಮಿತಿ ಸದಸ್ಯರು ಹಾಗೂ ನೂತನ ಕೋಚ್ ಗೌತಮ್ ಗಂಭೀರ್ ತಂಡದ ಆಯ್ಕೆ ಬಗ್ಗೆ ಸಭೆ ನಡೆಸಬೇಕಿತ್ತು. ಆದರೆ ಟಿ20 ನಾಯಕತ್ವ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಸಭೆ ಗುರುವಾರಕ್ಕೆ ಮುಂದೂಡಿಕೆಯಾಗಿದೆ ಎಂದು ತಿಳಿದುಬಂದಿದೆ. ಗುರುವಾರ ಸಭೆ ನಡೆಸಿ, ಬಳಿಕ ತಂಡದ ಆಟಗಾರರನ್ನು ಪ್ರಕಟಿಸುವ ಸಾಧ್ಯತೆಯಿದೆ.ಟಿ20 ನಾಯಕತ್ವಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಪೈಪೋಟಿ ಇದೆ. ರೋಹಿತ್ ಶರ್ಮಾ ಸರಣಿಗೆ ಗೈರಾದರೆ ಏಕದಿನ ನಾಯಕನಾಗಿ ಕೆ.ಎಲ್.ರಾಹುಲ್ ಆಯ್ಕೆಯಾಗುವ ನಿರೀಕ್ಷೆಯಿದೆ.
ಐಸಿಸಿ ಟಿ20 ರ್‍ಯಾಂಕಿಂಗ್: 6ನೇ ಸ್ಥಾನಕ್ಕೆ ಜೈಸ್ವಾಲ್
ದುಬೈ: ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ತಾರಾ ಬ್ಯಾಟರ್ ಯಶಸ್ವಿ ಜೈಸ್ವಾಲ್ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 6ನೇ ಸ್ಥಾನಕ್ಕೇರಿದ್ದಾರೆ.ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ 21ರ ಜೈಸ್ವಾಲ್ 4 ಸ್ಥಾನ ಪ್ರಗತಿ ಸಾಧಿಸಿದ್ದಾರೆ. ಆಸ್ಟ್ರೇಲಿಯಾದ ಟ್ರ್ಯಾವಿಸ್ ಹೆಡ್ ಅಗ್ರಸ್ಥಾನದಲ್ಲಿದ್ದು, ಸೂರ್ಯಕುಮಾರ್ ಯಾದವ್ 2ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಋತುರಾಜ್ ಗಾಯಕ್ವಾಡ್ 1 ಸ್ಥಾನ ಕುಸಿದು 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಶುಭ್‌ಮನ್ ಗಿಲ್ ಬರೋಬ್ಬರಿ 36 ಸ್ಥಾನ ಜಿಗಿತ ಕಂಡು 37ನೇ ಸ್ಥಾನ ತಲುಪಿದ್ದಾರೆ.
ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಭಾರತದ ಯಾರೊಬ್ಬರೂ ಅಗ್ರ-10ರಲ್ಲಿಲ್ಲ. ಅಕ್ಷರ್ ಪಟೇಲ್ 9ರಿಂದ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕುಲ್ದೀಪ್ ಯಾದವ್ 15ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ 4 ಸ್ಥಾನ ಕುಸಿದು 6ನೇ ಸ್ಥಾನ ತಲುಪಿದ್ದಾರೆ. ಅಕ್ಷರ್ 13ನೇ ಸ್ಥಾನಕ್ಕೆ ಕುಸಿದಿದ್ದಾರೆ.