ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ ಕೇವಲ 1 ಅಭ್ಯಾಸ ಪಂದ್ಯ?

| Published : May 16 2024, 12:48 AM IST / Updated: May 16 2024, 04:42 AM IST

ಸಾರಾಂಶ

ಐಪಿಎಲ್‌ ವೇಳೆ ಪ್ರಯಾಣದಿಂದ ಬಳಲಿರುವ ಭಾರತೀಯ ಆಟಗಾರರು ವಿಶ್ವಕಪ್‌ಗೂ ಮುನ್ನ ಸುದೀರ್ಘ ಪ್ರಯಾಣ ತಪ್ಪಿಸಲು ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದ್ದಾರೆ.

ನ್ಯೂಯಾರ್ಕ್‌: ಜೂನ್‌ 1ರಿಂದ 29ರ ವರೆಗೆ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಕೇವಲ 1 ಅಭ್ಯಾಸ ಪಂದ್ಯವನ್ನಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಸಾಮಾನ್ಯವಾಗಿ ವಿಶ್ವಕಪ್‌ ಟೂರ್ನಿಗಳಿಗೂ ಮುನ್ನ ಭಾರತ ಸೇರಿದಂತೆ ಬಹುತೇಕ ತಂಡಗಳು 2 ಅಭ್ಯಾಸ ಪಂದ್ಯಗಳನ್ನಾಡುತ್ತವೆ. ಆದರೆ ಈಗಾಗಲೇ ಐಪಿಎಲ್‌ ವೇಳೆ ಪ್ರಯಾಣದಿಂದ ಬಳಲಿರುವ ಭಾರತೀಯ ಆಟಗಾರರು ವಿಶ್ವಕಪ್‌ಗೂ ಮುನ್ನ ಸುದೀರ್ಘ ಪ್ರಯಾಣ ತಪ್ಪಿಸಲು ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದ್ದಾರೆ ಎಂದು ವರದಿಯಾಗಿದೆ. 

ಅಭ್ಯಾಸ ಪಂದ್ಯಗಳನ್ನು ಫ್ಲೋರಿಡಾದಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದ್ದು, ನ್ಯೂಯಾರ್ಕ್‌ನಿಂದ ಫ್ಲೋರಿಡಾಗೆ ಅಭ್ಯಾಸ ಪಂದ್ಯಕ್ಕಾಗಿ ಮಾತ್ರ ಪ್ರಯಾಣಿಸಲು ಭಾರತ ತಂಡ ನಿರಾಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‌ ಮುಗಿದ ಬೆನ್ನಲ್ಲೇ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಆರಂಭಗೊಳ್ಳಲಿದ್ದು, ಈಗಾಗಲೇ ತಂಡಗಳು ಸಜ್ಜಾಗಿವೆ. 

ಈ ನಡುವೆ ಟೂರ್ನಿಯ ವೇಳಾಪಟ್ಟಿಗೆ ಸಂಬಂಧಿಸಿ ಶುರುವಾಗಿದ್ದ ಕೆಲ ಗೊಂದಲಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಸ್ಪಷ್ಟನೆ ನೀಡಿದೆ. ಆದರೆ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಐಸಿಸಿ ಇನ್ನಷ್ಟೇ ಪ್ರಕಟಿಸಬೇಕಿದೆ.ಭಾರತ ಟೂರ್ನಿಯ ಮೊದಲ ಪಂದ್ಯದಲ್ಲಿ ಜೂ.5ಕ್ಕೆ ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್‌ ವಿರುದ್ಧ ಸೆಣಸಲಿದೆ. ಬಳಿಕ ಬದ್ಧವೈರಿ ಪಾಕಿಸ್ತಾನ ವಿರುದ್ಧ ಜೂ.9ಕ್ಕೆ ಆಡಲಿರುವ ಭಾರತ, ಜೂ.12ರಂದು ಅಮೆರಿಕ ಹಾಗೂ ಜೂ.15ರಂದು ಕೆನಡಾ ಸವಾಲು ಎದುರಿಸಲಿದೆ.ಜೂ.26ರಂದು ಟ್ರಿನಿಡಾಡ್‌ನಲ್ಲಿ ಮೊದಲ ಸೆಮಿಫೈನಲ್‌ ನಡೆಯಲಿದೆ. ಜೂ.27ರಂದು ಗಯಾನದಲ್ಲಿ 2ನೇ ಸೆಮೀಸ್‌ ನಿಗದಿಯಾಗಿದೆ.