ಸಾರಾಂಶ
ದುಬೈ: ಮೊದಲ ಎರಡು ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿರುವ ಟೀಂ ಇಂಡಿಯಾ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸೋತ ಕಾರಣ ನ್ಯೂಜಿಲೆಂಡ್ ನಂ.1 ಸ್ಥಾನ ಕಳೆದುಕೊಂಡಿದೆ.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿರುವ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸದ್ಯ ಆಡಿರುವ ಒಟ್ಟು 8 ಪಂದ್ಯಗಳಲ್ಲಿ 5 ಗೆಲುವು, 2 ಸೋಲು ಹಾಗೂ 1 ಡ್ರಾದೊಂದಿಗೆ 62 ಅಂಕ ಗಳಿಸಿದ್ದು, ಶೇ.64.58 ಗೆಲುವಿನ ಪ್ರತಿಶತದೊಂದಿಗೆ ನಂ.1 ಸ್ಥಾನದಲ್ಲಿದೆ.
ಕಿವೀಸ್ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲಿನೊಂದಿಗೆ ಶೇ. 60.00 ಗೆಲುವಿನ ಪ್ರತಿಶತ ಹೊಂದಿದ್ದು, 2ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 11 ಪಂದ್ಯಗಳಲ್ಲಿ 7 ಗೆಲುವು, 3 ಸೋಲು, 1 ಡ್ರಾದೊಂದಿಗೆ ಶೇ. 59.09 ಗೆಲುವಿನ ಪ್ರತಿಶತ ಹೊಂದಿದ್ದು, ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಕಿವೀಸ್ ವಿರುದ್ಧ 2ನೇ ಟೆಸ್ಟ್‌ನಲ್ಲೂ ಗೆದ್ದರೆ ತಂಡ 2ನೇ ಸ್ಥಾನಕ್ಕೇರುವ ಅವಕಾಶವಿದೆ. ಇದೇ ವೇಳೆ ಭಾರತ ವಿರುದ್ಧ ಸರಣಿ ಸೋಲುನುಭವಿಸಿರುವ ಇಂಗ್ಲೆಂಡ್(ಶೆ. 19.44) 8ನೇ ಸ್ಥಾನದಲ್ಲೇ ಬಾಕಿಯಾಗಿದೆ.
ಇನ್ನು, ಬಾಂಗ್ಲಾದೇಶ, ಪಾಕಿಸ್ತಾನ, ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ ಕ್ರಮವಾಗಿ 4, 5, 6 ಮತ್ತು 7ನೇ ಸ್ಥಾನಗಳಲ್ಲಿವೆ.