ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಭರ್ಜರಿ ಅಭ್ಯಾಸ

| Published : Sep 11 2025, 12:03 AM IST

ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಭರ್ಜರಿ ಅಭ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಏಷ್ಯಾಕಪ್‌ ಟಿ20ಯಲ್ಲಿ ಭಾರತಕ್ಕೆ ಅಮೋಘ ಆರಂಭ. ಯುಎಇ ವಿರುದ್ಧ 9 ವಿಕೆಟ್‌ ಜಯ. ಯುಎಇ 57ಕ್ಕೆ ಆಲೌಟ್‌. ಕೇವಲ 4.3 ಓವರಲ್ಲಿ ಗೆದ್ದ ಟೀಂ ಇಂಡಿಯಾ. ಸೆ.14ಕ್ಕೆ ಪಾಕಿಸ್ತಾನ ಎದುರಾಳಿ.

ದುಬೈ: ಏಷ್ಯಾಕಪ್‌ ಟಿ20 ಟೂರ್ನಿಯನ್ನು ಹಾಲಿ ವಿಶ್ವ ಚಾಂಪಿಯನ್‌ ಭಾರತ ನಿರೀಕ್ಷೆಯಂತೆಯೇ ಭರ್ಜರಿಯಾಗಿ ಆರಂಭಿಸಿದೆ. ಬುಧವಾರ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಸುಲಭ ಜಯ ಸಾಧಿಸಿತು.

ಟಾಸ್‌ ಗೆದ್ದ ಭಾರತಕ್ಕೆ ಮೊದಲು ಬ್ಯಾಟ್‌ ಮಾಡಿ ಬೃಹತ್‌ ಮೊತ್ತ ಪೇರಿಸುವ ಅವಕಾಶವಿತ್ತಾದರೂ, ತಂಡ ಮೊದಲು ಬೌಲ್‌ ಮಾಡಲು ನಿರ್ಧರಿಸಿತು. ಈ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಯುಎಇನಲ್ಲೇ ಚಾಂಪಿಯನ್ಸ್‌ ಟ್ರೋಫಿ ಆಡಿ ಗೆದ್ದಿದ್ದ ಭಾರತ, ಇಲ್ಲಿನ ಪಿಚ್‌ ಈಗಲೂ ಸ್ಪಿನ್‌ ಸ್ನೇಹಿಯಾಗಿಯೇ ಇದೆಯೇ ಎನ್ನುವುದನ್ನು ಪರೀಕ್ಷಿಸಲು ಮೊದಲು ಬೌಲ್‌ ಮಾಡಿದ್ದಾಗಿ ಪಂದ್ಯ ಗೆದ್ದ ಬಳಿಕ ನಾಯಕ ಸೂರ್ಯಕುಮಾರ್‌ ವಿವರಿಸಿದರು.

ಭಾರತದ ಬೌಲರ್‌ಗಳು ಆರಂಭಿಕ ಕೆಲ ಓವರ್‌ಗಳಲ್ಲಿ ರನ್‌ ಬಿಟ್ಟುಕೊಟ್ಟರೂ, ಯುಎಇ ದೊಡ್ಡ ಮೊತ್ತ ಗಳಿಸುವ ಆಲೋಚನೆ ಆರಂಭಿಸುವ ಮೊದಲೇ ಕಾರ್ಯಪ್ರವೃತರಾದರು. ಆರಂಭಿಕರಾದ ಅಲಿಶಾನ್‌ ಶರಾಫು 22, ನಾಯಕ ಮುಹಮ್ಮದ್‌ ವಸೀಂ 19 ರನ್‌ ಗಳಿಸಿದ್ದನ್ನು ಬಿಟ್ಟರೆ ಉಳಿದವರ್‍ಯಾರೂ 3 ರನ್‌ಗಿಂತ ಹೆಚ್ಚು ಗಳಿಸಲಿಲ್ಲ. 8 ಓವರಲ್ಲಿ 47 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಯುಎಇಗೆ 9ನೇ ಓವರ್‌ನಿಂದ ಪೆವಿಲಿಯನ್‌ ಪರೇಡ್‌ ಶುರು ಮಾಡಿತು. ಆ ಓವರಲ್ಲಿ ಕುಲ್ದೀಪ್‌ 3 ವಿಕೆಟ್‌ ಕಿತ್ತರು. 13.1 ಓವರಲ್ಲಿ ಯುಎಇ 57ಕ್ಕೆ ಆಲೌಟ್‌ ಆಯಿತು. 31 ಎಸೆತದಲ್ಲಿ 10 ರನ್‌ಗೆ ಕೊನೆ 8 ವಿಕೆಟ್‌ ಕಳೆದುಕೊಂಡಿತು. ಕುಲ್ದೀಪ್ 4, ಶಿವಂ ದುಬೆ 3, ಅಕ್ಷರ್‌, ವರುಣ್‌, ಬೂಮ್ರಾ ತಲಾ 1 ವಿಕೆಟ್‌ ಕಬಳಿಸಿದರು.

ಅತ್ಯಲ್ಪ ಮೊತ್ತ ಬೆನ್ನತ್ತಿದ ಭಾರತ ಗುರಿ ತಲುಪಿ ಹೆಚ್ಚು ಸಮಯ ಬೇಕಾಗಲಿಲ್ಲ. ಅಭಿಷೇಕ್‌ ಶರ್ಮಾ ಇನ್ನಿಂಗ್ಸ್‌ನ ಮೊದಲೆರಡು ಎಸೆತಗಳನ್ನು ಸಿಕ್ಸರ್‌, ಬೌಂಡರಿಗಟ್ಟಿದರು. 16 ಎಸೆತದಲ್ಲಿ 30 ರನ್‌ ಗಳಿಸಿ, ತಂಡ ಗೆಲುವಿನ ಹೊಸ್ತಿಲಲ್ಲಿದ್ದಾಗ ಔಟಾದರು. ಶುಭ್‌ಮನ್‌ ಗಿಲ್‌ 9 ಎಸೆತದಲ್ಲಿ 20, ಸೂರ್ಯಕುಮಾರ್‌ 2 ಎಸೆತದಲ್ಲಿ 7 ರನ್‌ ಗಳಿಸಿ ತಂಡಕ್ಕೆ ಕೇವಲ 4.3 ಓವರಲ್ಲಿ ಗೆಲುವು ತಂದುಕೊಟ್ಟರು.

ಭಾರತ ‘ಎ’ ಗುಂಪಿನ ತನ್ನ ಮುಂದಿನ ಪಂದ್ಯವನ್ನು ಭಾನುವಾರ (ಸೆ.14) ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡಲಿದೆ. ಸ್ಕೋರ್‌: ಯುಎಇ 13.1 ಓವರಲ್ಲಿ 57/10 (ಶರಾಫು 22, ವಸೀಂ 19, ಕುಲ್ದೀಪ್‌ 4-7, ದುಬೆ 3-4), ಭಾರತ 4.3 ಓವರಲ್ಲಿ 60/1 (ಅಭಿಷೇಕ್‌ 30, ಗಿಲ್‌ 22*, ಸಿದ್ದಿಕಿ 1-16) ಪಂದ್ಯಶ್ರೇಷ್ಠ: ಕುಲ್ದೀಪ್‌ ಯಾದವ್‌