ಜೈಸ್‌ಬಾಲ್ ಆಟಕ್ಕೆ ದಿಕ್ಕೆಟ್ಟ ಇಂಗ್ಲೆಂಡ್‌ನ ಬಾಜ್‌ಬಾಲ್‌

| Published : Feb 18 2024, 01:30 AM IST / Updated: Feb 18 2024, 01:07 PM IST

yashasvi-Jaiswal-records-against-England

ಸಾರಾಂಶ

ಇಂಗ್ಲೆಂಡ್‌ನ ಬಾಜ್‌ಬಾಲ್‌ ಆಟದ ರಣತಂತ್ರವನ್ನು ಟೀಂ ಇಂಡಿಯಾದ ಯುವ ತಾರೆ ಯಶಸ್ವಿ ಜೈಸ್ವಾಲ್‌ ಮತ್ತೊಮ್ಮೆ ತಮ್ಮದೇ ಜೈಸ್‌ಬಾಲ್‌ ಶೈಲಿಯ ಮೂಲಕ ಹಿಮ್ಮೆಟ್ಟಿಸಿದ್ದಾರೆ.

ರಾಜ್‌ಕೋಟ್‌: ಇಂಗ್ಲೆಂಡ್‌ನ ಬಾಜ್‌ಬಾಲ್‌ ಆಟದ ರಣತಂತ್ರವನ್ನು ಟೀಂ ಇಂಡಿಯಾದ ಯುವ ತಾರೆ ಯಶಸ್ವಿ ಜೈಸ್ವಾಲ್‌ ಮತ್ತೊಮ್ಮೆ ತಮ್ಮದೇ ಜೈಸ್‌ಬಾಲ್‌ ಶೈಲಿಯ ಮೂಲಕ ಹಿಮ್ಮೆಟ್ಟಿಸಿದ್ದಾರೆ. 

ಜೈಸ್ವಾಲ್‌ರ ಸ್ಫೋಟಕ ಶತಕದ ನೆರವಿನಿಂದ ಟೀಂ ಇಂಡಿಯಾ 3ನೇ ಟೆಸ್ಟ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಗೆಲುವಿನ ಲೆಕ್ಕಾಚಾರ ಶುರು ಮಾಡಿದೆ.ಭಾರತದ 445 ರನ್‌ಗೆ ಉತ್ತರವಾಗಿ ಇಂಗ್ಲೆಂಡ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಕಲೆಹಾಕಲು ಸಾಧ್ಯವಾಗಿದ್ದು 319 ರನ್‌ ಮಾತ್ರ. 

ದೊಡ್ಡ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 196 ರನ್‌ ಗಳಿಸಿದ್ದು, ಒಟ್ಟಾರೆ 322 ರನ್‌ ಮುನ್ನಡೆಯಲ್ಲಿದೆ.

ಇಂಗ್ಲೆಂಡ್‌ ಪತನ: 2ನೇ ದಿನದಂತ್ಯಕ್ಕೆ 35 ಓವರ್‌ಗಳಲ್ಲಿ 2 ವಿಕೆಟ್‌ಗೆ 207 ರನ್‌ ಗಳಿಸಿದ್ದ ಇಂಗ್ಲೆಂಡ್‌ ಶನಿವಾರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. 

ಜೋ ರೂಟ್‌(18) ಮತ್ತೆ ವಿಫಲರಾದರೆ, ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದ ಬೆನ್‌ ಡಕೆಟ್‌ 153 ರನ್‌ ಗಳಿಸಿದ್ದಾಗ ಗಿಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. 

ಆ ಬಳಿಕ ಇಂಗ್ಲೆಂಡ್‌ ಪತನ ಆರಂಭಗೊಂಡಿತು. ಆರ್‌.ಅಶ್ವಿನ್‌ ಅನುಪಸ್ಥಿತಿಯಲ್ಲೂ ಶಿಸ್ತುಬದ್ಧ ದಾಳಿ ನಡೆಸಿದ ಭಾರತ, ಇಂಗ್ಲೆಂಡ್‌ಗೆ ಆಘಾತ ನೀಡಿತು. ಬೆನ್‌ ಸ್ಟೋಕ್ಸ್‌(41) ಒಂದೆಡೆ ಭದ್ರವಾಗಿ ನೆಲೆಯೂರಿದರೂ ಇತರ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. 

ಬೆರ್‌ಸ್ಟೋಕ್‌ ಸೊನ್ನೆ ಸುತ್ತಿದರೆ, ಬೆನ್ ಫೋಕ್ಸ್‌ 13ಕ್ಕೆ ಔಟಾದರು. 224ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌, ಮತ್ತೆ 95 ರನ್‌ ಸೇರಿಸುವಷ್ಟರಲ್ಲಿ ಆಲೌಟಾಯಿತು. 

ಸಿರಾಜ್‌ 4, ಜಡೇಜಾ, ಕುಲ್ದೀಪ್‌ ತಲಾ 2 ವಿಕೆಟ್‌ ಕಿತ್ತರು.ಜೈಸ್ವಾಲ್ ಆರ್ಭಟ: 126 ರನ್‌ಗಳ ದೊಡ್ಡ ಮುನ್ನಡೆ ಪಡೆದ ಭಾರತ 2ನೇ ಇನ್ನಿಂಗ್ಸ್‌ನಲ್ಲಿ ಆತ್ಮವಿಶ್ವಾಸದೊಂದಿಗೇ ಬ್ಯಾಟ್‌ ಬೀಸಿತು. 

ರೋಹಿತ್‌ ಶರ್ಮಾ 19ಕ್ಕೆ ವಿಕೆಟ್‌ ಒಪ್ಪಿಸಿದರೂ, 2ನೇ ವಿಕೆಟ್‌ಗೆ ಜೊತೆಯಾದ ಜೈಸ್ವಾಲ್‌-ಶುಭ್‌ಮನ್‌ ಗಿಲ್‌ ಇಂಗ್ಲೆಂಡ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ 161 ರನ್‌ ಸೇರಿಸಿತು. 

ಆರಂಭದಲ್ಲಿ ನಿಧಾನ ಆಟಕ್ಕೆ ಒತ್ತುಕೊಟ್ಟು 73 ಎಸೆತದಲ್ಲಿ 35 ರನ್‌ ಗಳಿಸಿದ್ದ ಜೈಸ್ವಾಲ್‌ ಬಳಿಕ ಸಿಡಿದೆದ್ದರು.ಚೆಂಡನ್ನು ಮೂಲೆ ಮೂಲೆಗಟ್ಟಿದ ಜೈಸ್ವಾಲ್‌, 122 ಎಸೆತಗಳಲ್ಲಿ ಟೆಸ್ಟ್‌ನ 3ನೇ ಶತಕ ಪೂರ್ಣಗೊಳಿಸಿದರು. 

133 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ನೊಂದಿಗೆ 104 ರನ್‌ ಗಳಿಸಿದ್ದಾಗ ಬೆನ್ನು ನೋವಿಗೊಳಗಾದ ಜೈಸ್ವಾಲ್‌ ರಿಟೈಡ್‌ ಹರ್ಟ್‌ ಮೂಲಕ ಮೈದಾನ ತೊರೆದರು. ಬಳಿಕ ಕ್ರೀಸ್‌ಗೆ ಬಂದ ರಜತ್‌ ಪಾಟೀದಾರ್‌ ಸೊನ್ನೆಗೆ ನಿರ್ಗಮಿಸಿದರು.

ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟ ಗಿಲ್‌ 120 ಎಸೆತಗಳಲ್ಲಿ 65 ರನ್‌ ಸಿಡಿಸಿದ್ದು, ಕುಲ್ದೀಪ್‌ ಯಾದವ್‌(03) ಜೊತೆ 4ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಭಾನುವಾರ ಮತ್ತಷ್ಟು ರನ್‌ ಕಲೆಹಾಕಿ ಇಂಗ್ಲೆಂಡ್‌ಗೆ ಬೃಹತ್‌ ಗುರಿ ನೀಡಲು ಭಾರತ ಕಾಯುತ್ತಿದೆ.

ಸ್ಕೋರ್‌: ಭಾರತ 445/10 ಮತ್ತು 196/2(3ನೇ ದಿನದಂತ್ಯಕ್ಕೆ) (ಜೈಸ್ವಾಲ್‌ 104, ಗಿಲ್‌ 65, ಹಾರ್ಟ್ಲಿ 1-42), ಇಂಗ್ಲೆಂಡ್‌ 319/10(ಡಕೆಟ್‌ 153, ಸ್ಟೋಕ್ಸ್‌ 41, ಸಿರಾಜ್‌ 4-84)

03ನೇ ಶತಕ: ಜೈಸ್ವಾಲ್‌ ಟೆಸ್ಟ್‌ನಲ್ಲಿ 3ನೇ ಶತಕ ಸಿಡಿಸಿದರು. ಅವರು ಟಿ20, ಏಕದಿನದಲ್ಲಿ ತಲಾ 1 ಸೆಂಚುರಿ ಬಾರಿಸಿದ್ದಾರೆ.-08ನೇ ಬಾರಿಬೇರ್‌ಸ್ಟೋವ್‌ ಭಾರತದ ವಿರುದ್ಧ ಟೆಸ್ಟ್‌ನಲ್ಲಿ 8ನೇ ಬಾರಿ ಸೊನ್ನೆಗೆ ಔಟಾದರು. ಇದು ಯಾವುದೇ ಬ್ಯಾಟರ್‌ ಪೈಕಿ ಗರಿಷ್ಠ.

ತವರಲ್ಲಿ 200 ಟೆಸ್ಟ್ ವಿಕೆಟ್‌: ಜಡೇಜಾ 5ನೇ ಭಾರತೀಯಜಡೇಜಾ ತವರಿನ ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ಭಾರತದ 5ನೇ ಬೌಲರ್‌ ಎನಿಸಿಕೊಂಡಿದ್ದಾರೆ. 

ಅನಿಲ್‌ ಕುಂಬ್ಳೆ 350, ಆರ್‌.ಅಶ್ವಿನ್ 347, ಹರ್ಭಜನ್‌ ಸಿಂಗ್‌ 265 ಹಾಗೂ ಕಪಿಲ್‌ ದೇವ್‌ ಭಾರತದಲ್ಲಿ 219 ವಿಕೆಟ್‌ಗಳನ್ನು ಪಡೆದಿದ್ದಾರೆ.

104 ರನ್‌ 133 ಎಸೆತ 09 ಬೌಂಡರಿ 05 ಸಿಕ್ಸರ್‌