ಸರಣಿ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ

| Published : Feb 26 2024, 01:31 AM IST / Updated: Feb 26 2024, 11:51 AM IST

ಸಾರಾಂಶ

ಧೃವ್‌ ಜುರೆಲ್‌-ಕುಲ್ದೀಪ್‌ ಯಾದವ್‌ ಕೆಚ್ಚೆದೆಯ ಹೋರಾಟ, ಬಳಿಕ ಬೌಲಿಂಗ್‌ನಲ್ಲಿ ಆರ್‌.ಅಶ್ವಿನ್‌-ಕುಲ್ದೀಪ್‌ ಮಾಡಿದ ಮ್ಯಾಜಿಕ್‌ನಿಂದಾಗಿ ಇಂಗ್ಲೆಂಡ್‌ ವಿರುದ್ಧ ಭಾರತ ಸರಣಿ ಗೆಲುವಿನ ಹೊಸ್ತಿಲು ತಲುಪಿದೆ.

ರಾಂಚಿ: ಧೃವ್‌ ಜುರೆಲ್‌-ಕುಲ್ದೀಪ್‌ ಯಾದವ್‌ ಕೆಚ್ಚೆದೆಯ ಹೋರಾಟ, ಬಳಿಕ ಬೌಲಿಂಗ್‌ನಲ್ಲಿ ಆರ್‌.ಅಶ್ವಿನ್‌-ಕುಲ್ದೀಪ್‌ ಮಾಡಿದ ಮ್ಯಾಜಿಕ್‌ನಿಂದಾಗಿ ಇಂಗ್ಲೆಂಡ್‌ ವಿರುದ್ಧ ಭಾರತ ಸರಣಿ ಗೆಲುವಿನ ಹೊಸ್ತಿಲು ತಲುಪಿದೆ. 

4ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಗೆಲುವಿಗೆ 192 ರನ್‌ ಗುರಿ ಲಭಿಸಿದ್ದು, 3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 40 ರನ್‌ ಕಲೆಹಾಕಿದೆ.

ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 3-1ರಲ್ಲಿ ಗೆಲ್ಲಲು ಭಾರತಕ್ಕೆ ಇನ್ನು 152 ರನ್‌ ಅಗತ್ಯವಿದೆ.ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಹೊರತಾಗಿಯೂ ಅಮೋಘ ಬೌಲಿಂಗ್‌ ಪ್ರದರ್ಶಿಸಿದ ಭಾರತದ ಸ್ಪಿನ್ನರ್‌ಗಳು ಪಂದ್ಯ ಕೈ ಜಾರದಂತೆ ನೋಡಿಕೊಂಡರು. 

ಬಳಿಕ ಅಬ್ಬರದ ಬ್ಯಾಟಿಂಗ್ ಆರಂಭಿಸಿರುವ ಬ್ಯಾಟರ್‌ಗಳು, ಭಾರತೀಯರಲ್ಲಿ ಜಯದ ನಿರೀಕ್ಷೆ ಮೂಡಿಸಿದ್ದಾರೆ. ಇಂಗ್ಲೆಂಡ್‌ ಕೂಡಾ ಸೋಲನ್ನು ಅಷ್ಟು ಬೇಗ ಒಪ್ಪಿಕೊಳ್ಳಲು ಸಿದ್ಧರಿಲ್ಲ. 

ಕಡಿಮೆ ಮೊತ್ತವಾದರೂ ಭಾರತವನ್ನು ಕಟ್ಟಿಹಾಕಿ ಪಂದ್ಯ ಗೆಲ್ಲಲು ಎದುರು ನೋಡುತ್ತಿದೆ. ಹೀಗಾಗಿ ಸೋಮವಾರದ ಮೊದಲ ಅವಧಿ ಇತ್ತಂಡಗಳಿಗೂ ನಿರ್ಣಾಯಕವೆನಿಸಿದೆ.

ಧೃವ್‌ ಕೆಚ್ಚೆದೆಯ ಹೋರಾಟ: 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 219 ರನ್‌ ಗಳಿಸಿ ಸಂಕಷ್ಟದಲ್ಲಿದ್ದ ಭಾರತಕ್ಕೆ ಭಾನುವಾರ ಧೃವ್‌-ಕುಲ್ದೀಪ್‌ ಆಸರೆಯಾದರು. 

ಇಂಗ್ಲೆಂಡ್‌ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಕುಲ್ದೀಪ್‌ 131 ಎಸೆತಗಳಲ್ಲಿ 28 ರನ್‌ ಗಳಿಸಿದರೆ, ಏಕಾಂಗಿ ಹೋರಾಟ ನಡೆಸಿದ ಜುರೆಲ್‌ 90 ರನ್‌ ಸಿಡಿಸಿ ಭಾರತದ ಆಪತ್ಬಾಂಧವರಾದರು. 

ಆದರೂ ತಂಡ 307ಕ್ಕೆ ಆಲೌಟಾಗಿ 46 ರನ್‌ ಹಿನ್ನಡೆ ಅನುಭವಿಸಿತು. ಚೊಚ್ಚಲ ಸರಣಿ ಆಡುತ್ತಿರುವ 20ರ ಬಶೀರ್‌ 5 ವಿಕೆಟ್‌ ಗೊಂಚಲು ಪಡೆದರು.

ಸ್ಪಿನ್ನರ್ಸ್‌ ಮ್ಯಾಜಿಕ್‌: ಇನ್ನಿಂಗ್ಸ್‌ ಮುನ್ನಡೆಯ ಹುಮ್ಮಸ್ಸಿನೊಂದಿಗೆ ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ಗೆ ಭಾರತೀಯ ಸ್ಪಿನ್ನರ್‌ಗಳು ದುಸ್ವಪ್ನವಾಗಿ ಕಾಡಿದರು. ಆರಂಭಿಕ ಆಟಗಾರ ಜ್ಯಾಕ್‌ ಕ್ರಾವ್ಲಿ(60 ರನ್‌) ಹೊರತುಪಡಿಸಿ ಇತರೆಲ್ಲಾ ಬ್ಯಾಟರ್ಸ್‌ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್‌ ನಡೆಸಿದರು. 

ಡಕೆಟ್‌(15), ಓಲಿ ಪೋಪ್‌(00), ರೂಟ್‌(11) ವಿಕೆಟ್‌ ಕಿತ್ತ ಅಶ್ವಿನ್ ಆರಂಭದಲ್ಲೇ ಭಾರತಕ್ಕೆ ಮೇಲುಗೈ ಒದಗಿಸಿದರು. ಈ ಹಂತದಲ್ಲಿ ಬೇರ್‌ಸ್ಟೋವ್‌ 30 ರನ್‌ ಕೊಡುಗೆ ನೀಡಿದರೂ ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಅಶ್ವಿನ್‌ 51ಕ್ಕೆ 5 ವಿಕೆಟ್‌ ಕಿತ್ತರೆ, ಕುಲ್ದೀಪ್‌ 22 ರನ್‌ ನೀಡಿ 4 ವಿಕೆಟ್‌ ಪಡೆದರು. 

ಮತ್ತೊಂದು ವಿಕೆಟ್‌ ಜಡೇಜಾ ಪಾಲಾಯಿತು.ಸದ್ಯ 2ನೇ ಇನ್ನಿಂಗ್ಸ್‌ನಲ್ಲಿ ರೋಹಿತ್‌(ಔಟಾಗದೆ 24) ಹಾಗೂ ಯಶಸ್ವಿ ಜೈಸ್ವಾಲ್‌(ಔಟಾಗದೆ 16) ಕ್ರೀಸ್‌ ಕಾಯ್ದುಕೊಂಡಿದ್ದು, ಸೋಮವಾರವೂ ಅಬ್ಬರದ ಆಟವಾಗಿ ಗೆಲುವು ತಂದುಕೊಡುವ ಕಾತರದಲ್ಲಿದ್ದಾರೆ.

ಸ್ಕೋರ್‌: ಇಂಗ್ಲೆಂಡ್‌ 353/10 ಮತ್ತು 145/10 (ಕ್ರಾವ್ಲಿ 60, ಬೇರ್‌ಸ್ಟೋವ್‌ 30, ಅಶ್ವಿನ್‌ 5-51, ಕುಲ್ದೀಪ್‌ 4-22), ಭಾರತ 307/10(ಧೃವ್‌ 90, ಕುಲ್ದೀಪ್‌ 28, ಬಶೀರ್‌ 5-119) ಮತ್ತು 40/0(ರೋಹಿತ್‌ 24*, ಜೈಸ್ವಾಲ್‌ 16*)

ರೋಹಿತ್‌ ಟೆಸ್ಟ್‌ನಲ್ಲಿ400 ರನ್‌ ಮೈಲಿಗಲ್ಲು: ರೋಹಿತ್‌ ಶರ್ಮಾ ಟೆಸ್ಟ್‌ನಲ್ಲಿ 4000 ರನ್‌ ಮೈಲಿಗಲ್ಲು ಸಾಧಿಸಿದ್ದಾರೆ. ಅವರು ಈ ಸಾಧನೆ ಮಾಡಿದ ಭಾರತದ 17ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ವೇಗವಾಗಿ 4000 ರನ್‌ ಗಳಿಸಿದವರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. 2013ರಲ್ಲಿ ಟೆಸ್ಟ್‌ ಪಾದಾರ್ಪಣೆ ಮಾಡಿದ್ದ ರೋಹಿತ್‌ ಈಗ 58ನೇ ಪಂದ್ಯವಾಡುತ್ತಿದ್ದಾರೆ. 11 ಶತಕ, 16 ಅರ್ಧಶತಕ ಸಿಡಿಸಿದ್ದಾರೆ.

2ನೇ ಅತಿಕಿರಿಯ: ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಪರ 5+ ವಿಕೆಟ್‌ ಗೊಂಚಲು ಪಡೆದ 2ನೇ ಅತಿ ಕಿರಿಯ ಆಟಗಾರ ಬಶೀರ್‌.

ತವರಿನಲ್ಲಿ 200ಕ್ಕಿಂತ ಕಡಿಮೆ ಗುರಿ ಸಿಕ್ಕಾಗ ಸೋತೇ ಇಲ್ಲ ಭಾರತ
ಭಾರತ ತಂಡ ಈ ವರೆಗೂ ತವರಿನ ಟೆಸ್ಟ್‌ನಲ್ಲಿ 200ಕ್ಕಿಂತ ಕಡಿಮೆ ಗುರಿ ಸಿಕ್ಕಾಗ ಒಂದೂ ಪಂದ್ಯದಲ್ಲಿ ಸೋತಿಲ್ಲ. ಇದುವರೆಗೂ ವಿದೇಶಿ ತಂಡಗಳು ಭಾರತದಲ್ಲಿ ಟೀಂ ಇಂಡಿಯಾಕ್ಕೆ 32 ಬಾರಿ 200ಕ್ಕಿಂತ ಕಡಿಮೆ ಗುರಿ ನೀಡಿವೆ. ಈ ಪೈಕಿ 29 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದು, 3 ಪಂದ್ಯಗಳು ಡ್ರಾಗೊಂಡಿವೆ.