ಇಂದಿನಿಂದ ಭಾರತ vs ಇಂಗ್ಲೆಂಡ್‌ ಟಿ20

| N/A | Published : Jun 28 2025, 11:34 AM IST

Indian Womens Cricket team qualify for the ICC Women's Cricket World Cup 2021

ಸಾರಾಂಶ

ಮುಂದಿನ ವರ್ಷ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ನಡೆಯಲಿದೆ. ಅದಕ್ಕಾಗಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಈಗಿಂದಲೇ ಸಿದ್ಧತೆ ಆರಂಭಿಸಲಿದ್ದು, ಶನಿವಾರದಿಂದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿವೆ. ಇಂಗ್ಲೆಂಡ್‌ನ 5 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ನಾಟಿಂಗ್‌ಹ್ಯಾಮ್‌: ಮುಂದಿನ ವರ್ಷ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ನಡೆಯಲಿದೆ. ಅದಕ್ಕಾಗಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಈಗಿಂದಲೇ ಸಿದ್ಧತೆ ಆರಂಭಿಸಲಿದ್ದು, ಶನಿವಾರದಿಂದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿವೆ. ಇಂಗ್ಲೆಂಡ್‌ನ 5 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಭಾರತ ಈವರೆಗೂ ವಿಶ್ವಕಪ್‌ ಗೆದ್ದಿಲ್ಲ. ಮುಂದಿನ ವರ್ಷ ವಿಶ್ವಕಪ್‌ ಗೆಲ್ಲುವ ಗುರಿ ಇಟ್ಟುಕೊಂಡಿರುವ ತಂಡ ಅದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ಇಂಗ್ಲೆಂಡ್‌ನಲ್ಲೇ ವಿಶ್ವಕಪ್‌ ನಡೆಯಲಿರುವುದರಿಂದ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಆಡುವ ಆಟಗಾರ್ತಿಯರನ್ನು ಗುರುತಿಸಿ ಸಮರ್ಥ ತಂಡ ಕಟ್ಟುವುದು ಭಾರತದ ಮುಂದಿರುವ ಗುರಿ. ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರ್ತಿಯರಿದ್ದಾರೆ. ಉಪನಾಯಕಿ ಸ್ಮೃತಿ ಮಂಧನಾ, ತಂಡದಲ್ಲಿ ಮತ್ತೆ ಸ್ಥಾನ ಗಿಟ್ಟಿಸಿಕೊಂಡಿರುವ ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌, ರಿಚಾ ಘೋಷ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ತಂಡಕ್ಕೆ ಹೆಚ್ಚಿನ ತಲೆನೋವು ತಂದಿರುವುದು ಬೌಲಿಂಗ್‌ ವಿಭಾಗ. ವೇಗಿಗಳಾದ ರೇಣುಕಾ ಸಿಂಗ್‌, ಪೂಜಾ ವಸ್ತ್ರಾಕರ್‌ ಗಾಯದಿಂದಾಗಿ ಸರಣಿಯಲ್ಲಿ ಆಡುತ್ತಿಲ್ಲ. ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರ್ತಿಯರಾದ ಕ್ರಾಂತಿ ಗೌಡ್‌, ಶ್ರೀ ಚರಣಿ ಹಾಗೂ ಸಯಾಲಿ ಸತ್ಗಾರೆ ಮೇಲೆ ಹೆಚ್ಚಿನ ಭರವಸೆ ಇದೆ. ತಾರಾ ಆಲ್ರೌಂಡರ್‌ಗಳಾದ ದೀಪ್ತಿ ಶರ್ಮಾ, ಸ್ನೇಹ ರಾಣಾ ಕೂಡಾ ತಮ್ಮ ಮೇಲಿನ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ.

ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್‌: ಭಾರತಕ್ಕೆ ಹೋಲಿಸಿದರೆ ಆತಿಥೇಯ ಇಂಗ್ಲೆಂಡ್‌ ಹೆಚ್ಚಿನ ಆತ್ಮವಿಶ್ವಾಸದಲ್ಲೇ ಆಡಲಿದೆ. ಭಾರತ ಸರಣಿಗೂ ಮುನ್ನ ನಡೆದ 2 ಅಭ್ಯಾಸ ಪಂದ್ಯಗಳಲ್ಲೂ ಇಸಿಬಿ ತಂಡದ ವಿರುದ್ಧ ಸೋತಿದೆ. ಅತ್ತ ಇಂಗ್ಲೆಂಡ್‌ ಬಲಿಷ್ಠ ತಂಡವನ್ನು ಕಟ್ಟಿ ಆಡುವುದರ ಜೊತೆಗೆ ತವರಿನ ಅಂಗಳದ ಲಾಭವನ್ನೂ ಪಡೆಯಲಿದೆ. ನ್ಯಾಟ್‌ ಶೀವರ್‌ ಬ್ರಂಟ್‌ ನಾಯಕತ್ವದ ತಂಡದಲ್ಲಿ ಸೋಫಿ ಡಂಕ್ಲಿ, ಅಲೈಸ್‌ ಕ್ಯಾಪ್ಸಿ, ಇಸ್ಸಿ ವೊಂಗ್‌ ಇದ್ದಾರೆ. ಉಳಿದಂತೆ ಆ್ಯಮಿ ಜೋನ್ಸ್‌, ಸೋಫಿ ಎಕ್ಲೆಸ್ಟೋನ್‌, ಟಾಮಿ ಬ್ಯೂಮೊಂಟ್‌, ಡ್ಯಾನಿ ವ್ಯಾಟ್‌ ಹಾಡ್ಜ್‌ ಸೇರಿದಂತೆ ಹಲವು ಅನುಭವಿ ಆಟಗಾರ್ತಿಯರ ಬಲವೂ ತಂಡಕ್ಕಿದೆ.

ಪಂದ್ಯ: ಸಂಜೆ 7 ಗಂಟೆಗೆ(ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಲೈವ್‌, ಸೋನಿ ಸ್ಪೋರ್ಟ್ಸ್‌

ಇಂಗ್ಲೆಂಡ್‌ ವಿರುದ್ಧ ಟಿ20

ಸರಣಿ ಗೆದ್ದಿಲ್ಲ ಭಾರತ

ಭಾರತ ತಂಡ ಇಂಗ್ಲೆಂಡ್ ವಿರುದ್ಧ ಈವರೆಗೂ ಸರಣಿ ಗೆದ್ದಿಲ್ಲ. 2006ರಲ್ಲಿ ನಡೆದಿದ್ದ ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆದ್ದಿತ್ತು. ಆ ಬಳಿಕ 6 ಸರಣಿಗಳು ನಡೆದಿದ್ದು, ಎಲ್ಲದರಲ್ಲೂ ಇಂಗ್ಲೆಂಡ್‌ ಜಯಗಳಿಸಿವೆ. ಒಟ್ಟಾರೆ 2 ತಂಡಗಳು 30 ಬಾರಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 22ರಲ್ಲಿ ಗೆದ್ದಿದ್ದರೆ, ಭಾರತ 8 ಪಂದ್ಯಗಳಲ್ಲಿ ಜಯಗಳಿಸಿದೆ.

Read more Articles on