ಸಾರಾಂಶ
ಬ್ಲೂಮ್‌ಫೌಂಟೇನ್: ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಅಂಡರ್-19 ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿರುವ ಭಾರತ ತಂಡವು, ಸೂಪರ್-6 ಹಂತದ ತನ್ನ ಮೊದಲ ಪಂದ್ಯದಲ್ಲಿ ಮಂಗಳವಾರ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಪರಿಣಾಮ ಭಾರತ ಈ ಪಂದ್ಯವನ್ನೂ ಇಲ್ಲಿನ ಮನ್ಗುವಾಂಗ್ ಓವಲ್ ಕ್ರೀಡಾಂಗಣದಲ್ಲೇ ಆಡುವ ಅವಕಾಶ ಪಡೆದಿದ್ದು, ಇದೇ ಮೈದಾನದಲ್ಲಿ ಗುಂಪು ಹಂತದ ಎಲ್ಲಾ ಮೂರು ಪಂದ್ಯಗಳನ್ನಾಡಿ ಭಾರತ ಜಯಿಸಿತ್ತು.
ಗುಂಪು ಹಂತದಲ್ಲಿ ಭಾರತ ಆಲ್ರೌಂಡ್ ಪ್ರದರ್ಶನ ನೀಡಿದ್ದರೂ, ಕೆಲ ಆಟಗಾರರು ಇನ್ನಷ್ಟೇ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಬೇಕಿದೆ.
ಪಂದ್ಯ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸೂಪರ್-6 ಮಾದರಿ ಹೇಗೆ?
ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಒಟ್ಟು 16 ತಂಡಗಳ ಪೈಕಿ ಸೂಪರ್-6 ಹಂತಕ್ಕೆ 12 ತಂಡಗಳು ಕಾಲಿಟ್ಟಿದ್ದು, ತಲಾ 6 ತಂಡಗಳ ಎರಡು ಗುಂಪುಗಳನ್ನು ರಚಿಸಲಾಗಿದೆ.
ಸೂಪರ್-6ಗೆ ಕಾಲಿಟ್ಟಿರುವ ತಂಡಗಳ ಪೈಕಿ ಈಗಾಗಲೇ ಗುಂಪು ಹಂತದಲ್ಲಿ ಆ ತಂಡವನ್ನು ಎದುರಿಸಿದ್ದರೆ, ಆ ಪಂದ್ಯದಲ್ಲಿ ಗಳಿಸಿದ ಅಂಕ, ನೆಟ್ ರನ್‌ರೇಟ್ ಸೂಪರ್-6ನಲ್ಲೂ ಪರಿಗಣಿಸಲ್ಪಡುತ್ತದೆ.
ಭಾರತ ಗುಂಪು ಹಂತದಲ್ಲಿ ಬಾಂಗ್ಲಾ, ಐರ್ಲೆಂಡ್ ತಂಡಗಳನ್ನು ಸೋಲಿಸಿತ್ತು. ಹೀಗಾಗಿ, ಸೂಪರ್-6ನ ಗುಂಪು-1ರಲ್ಲಿ 4 ಅಂಕಗಳೊಂದಿಗೆ ಈಗಾಗಲೇ ಮೊದಲ ಸ್ಥಾನದಲ್ಲಿದೆ.
ಸೂಪರ್-6ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್, ನೇಪಾಳ ಎದುರಾಗಲಿದ್ದು, ಗುಂಪಿನಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆದರೆ ಸೆಮಿಫೈನಲ್‌ಗೆ ಪ್ರವೇಶ ಸಿಗಲಿದೆ.