ಸಾರಾಂಶ
ಅಮನ್‌ಜೋತ್ ಕೌರ್ ಹಾಗೂ ಜೆಮಿಮಾ ರೋಡ್ರಿಗ್ಸ್ ಅಭೂತಪೂರ್ವ ಆಟದ ನೆರವಿನಿಂದ ಭಾರತ ಮಹಿಳೆಯರ ತಂಡ ಇಂಗ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 24 ರನ್ ಗೆಲುವು ಸಾಧಿಸಿದೆ.
ಬ್ರಿಸ್ಟೋಲ್(ಇಂಗ್ಲೆಂಡ್): ಅಮನ್‌ಜೋತ್ ಕೌರ್ ಹಾಗೂ ಜೆಮಿಮಾ ರೋಡ್ರಿಗ್ಸ್ ಅಭೂತಪೂರ್ವ ಆಟದ ನೆರವಿನಿಂದ ಭಾರತ ಮಹಿಳೆಯರ ತಂಡ ಇಂಗ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 24 ರನ್ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ20 ಸರಣಿ ಗೆಲುವಿನತ್ತ ದಾಪುಗಾಲಿಟ್ಟಿದೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿತು. ತಂಡ 4 ವಿಕೆಟ್‌ಗೆ 181 ರನ್ ಕಲೆಹಾಕಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸ್ಮೃತಿ ಮಂಧನಾ 13, ಶಫಾಲಿ ವರ್ಮಾ 3, ನಾಯಕಿ ಹರ್ಮನ್‌ಪ್ರೀತ್ ಕೌರ್ 1 ರನ್‌ಗೆ ಔಟಾದರು. ಆದರೆ ಅಮನ್‌ಜೋತ್(40 ಎಸೆತಕ್ಕೆ ಔಟಾಗದೆ 63) ಚೊಚ್ಚಲ ಅರ್ಧಶತಕ, ಜೆಮಿಮಾ(41 ಎಸೆತಕ್ಕೆ 63) ಆಕರ್ಷಕ ಆಟ ತಂಡ ದೊಡ್ಡ ಮೊತ್ತ ಗಳಿಸಲು ನೆರವಾಯಿತು. ಕೊನೆಯಲ್ಲಿ ರಿಚಾ ಘೋಷ್ 20 ಎಸೆತಕ್ಕೆ 32 ರನ್ ಸಿಡಿಸಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ನ್ನು ಮತ್ತೆ ಭಾರತೀಯ ಬೌಲರ್‌ಗಳು ಕಾಡಿದರು. ಆತಿಥೇಯ ತಂಡ 7 ವಿಕೆಟ್‌ಗೆ 157 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಟಾಮಿ ಬ್ಯೂಮೊಂಟ್ 35 ಎಸೆತಕ್ಕೆ 54 ರನ್ ಗಳಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಮತ್ತೆ ಮಿಂಚಿದ ಶ್ರೀ ಚರಣಿ 28 ರನ್‌ಗೆ 2 ವಿಕೆಟ್ ಕಿತ್ತರು.
ಸ್ಕೋರ್: ಭಾರತ 20 ಓವರಲ್ಲಿ 181/4 (ಅಮನ್‌ಜೋತ್ ಔಟಾಗದೆ 63, ಜೆಮಿಮಾ 63, ಲಾರೆನ್ ಬೆಲ್ 2-17), ಇಂಗ್ಲೆಂಡ್ 20 ಓವರಲ್ಲಿ 157/7 (ಬ್ಯೂಮೊಂಟ್ 54, ಎಕ್ಲೆಸ್ಟೋನ್ 35, ಚರಣಿ 2-28)
ಪಂದ್ಯಶ್ರೇಷ್ಠ: ಅಮನ್‌ಜೋತ್ ಕೌರ್
01ನೇ ಸೋಲು
ಇಂಗ್ಲೆಂಡ್ ತಂಡ ಬ್ರಿಸ್ಟೋಲ್ ಕ್ರೀಡಾಂಗಣದಲ್ಲಿ ಮೊದಲ ಬಾರಿ ಅಂ.ರಾ. ಟಿ20 ಪಂದ್ಯ ಸೋತಿತು. ಮೊದಲ 5 ಪಂದ್ಯದಲ್ಲೂ ತಂಡ ಗೆದ್ದಿತ್ತು.