ಸಾರಾಂಶ
ಬೆಂಗಳೂರು: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸುವ ನಿರೀಕ್ಷೆಯಲ್ಲಿರುವ ಭಾರತ ಮಹಿಳಾ ತಂಡ, ಭಾನುವಾರ ಏಕದಿನ ಸರಣಿಯನ 3ನೇ ಹಾಗೂ ಕೊನೆ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ದ.ಆಫ್ರಿಕಾ ಗೆಲುವಿನೊಂದಿಗೆ ಸರಣಿಗೆ ವಿದಾಯ ಹೇಳಲು ಕಾಯುತ್ತಿದೆ.
ಆರಂಭಿಕ ಪಂದ್ಯದಲ್ಲಿ ಅಭೂತಪೂರ್ವ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಬೌಲರ್‌ಗಳ ನೆರವಿನಿಂದ ಗೆಲುವು ತನ್ನದಾಗಿಸಿಕೊಂಡಿತ್ತು. ಸತತ 2 ಶತಕ ಸಿಡಿಸಿರುವ ಸ್ಮೃತಿ ಮಂಧನಾ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದು, ಕಳೆದ ಪಂದ್ಯದಲ್ಲಿ 103 ರನ್ ಸಿಡಿಸಿದ್ದ ನಾಯಕಿ ಹರ್ಮನ್‌ಪ್ರೀತ್ ಕೂಡಾ ಮತ್ತೊಂದು ಅಮೋಘ ಇನ್ನಿಂಗ್ಸ್‌ನ ನಿರೀಕ್ಷೆಯಲ್ಲಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಅವಕಾಶ ವಂಚಿತರಾಗಿದ್ದ ಕರ್ನಾಟಕದ ಶ್ರೇಯಾಂಕ ಪಾಟೀಲ್ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
2ನೇ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ನಗಾಲ್
ಚೆನ್ನೈ: ಭಾರತದ ಅಗ್ರ ಟೆನಿಸಿಗ ಸುಮಿತ್ ನಗಾಲ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದನ್ನು ಸ್ವತಃ ಅವರೇ ಖಚಿತಪಡಿಸಿಕೊಂಡಿದ್ದು, ಒಲಿಂಪಿಕ್ಸ್‌ಗೆ ಅಧಿಕೃತವಾಗಿ ಪ್ರವೇಶ ಪಡೆದಿದ್ದೇನೆ’ ಎಂದು ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಹೀಲ್‌ಬ್ರಾನ್ ಚಾಲೆಂಜರ್ ಟೂರ್ನಿಯಲ್ಲಿ ಗೆದ್ದಿದ್ದ ಸುಮಿತ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-80ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅವರು ರ್‍ಯಾಂಕಿಂಗ್ ಆಧಾರದ ಮೇಲೆ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದು, ಸದ್ಯ 71ನೇ ಸ್ಥಾನದಲ್ಲಿದ್ದಾರೆ. 26 ವರ್ಷದ ಸುಮಿತ್‌ಗೆ ಇದು 2ನೇ ಒಲಿಂಪಿಕ್ಸ್.
2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಆಡಿದ್ದ ಅವರು, 2ನೇ ಸುತ್ತಿನಲ್ಲಿ ಅಭಿಯಾನ ಕೊನೆಗೊಳಿಸಿದ್ದರು. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ-ಶ್ರೀರಾಮ್ ಬಾಲಾಜಿ ಕೂಡಾ ಕಣಕ್ಕಿಳಿಯಲಿದ್ದಾರೆ.