ಜೂನ್‌ನಲ್ಲಿ ಬೆಂಗಳೂರಲ್ಲಿ ಭಾರತ-ದ.ಆಫ್ರಿಕಾ ಮಹಿಳಾ ಒನ್‌ಡೇ ಸರಣಿ

| Published : May 15 2024, 01:35 AM IST / Updated: May 16 2024, 04:50 AM IST

ಸಾರಾಂಶ

ಬೆಂಗಳೂರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಲಿದೆ ಭಾರತ ಮಹಿಳಾ ಕ್ರಿಕೆಟ್‌ ತಂಡ. ಬೆಂಗಳೂರು ಕ್ರಿಕೆಟ್‌ ಅಭಿಮಾನಿಗಳಿಗೆ ಹರ್ಮನ್‌ಪ್ರೀತ್‌, ಸ್ಮೃತಿ ಮಂಧನಾ ಆಟ ನೋಡುವ ಅವಕಾಶ. ಜೂನ್‌ನಲ್ಲಿ ಸರಣಿ.

ನವದೆಹಲಿ: ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡ ಭಾರತಕ್ಕೆ ಆಗಮಿಸಲಿದ್ದು, 3 ಏಕದಿನ, 1 ಟೆಸ್ಟ್‌ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಜೂ.16ರಿಂದ 23ರ ವರೆಗೂ ನಡೆಯಲಿರುವ ಏಕದಿನ ಸರಣಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ.ಇದಕ್ಕೂ ಮುನ್ನ ಜೂ.13ರಂದು ಬೆಂಗಳೂರಲ್ಲೇ ಅಭ್ಯಾಸ ಪಂದ್ಯವೊಂದು ಸಹ ನಡೆಯಲಿದೆ. ಜೂ.28ರಿಂದ ಜು.1ರ ವರೆಗೂ ಏಕೈಕ ಟೆಸ್ಟ್‌, ಜು.5ರಿಂದ ಜು.9ರ ವರೆಗೂ ಚೆನ್ನೈನಲ್ಲಿ ಟಿ20 ಸರಣಿ ನಡೆಯಲಿದೆ.

ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂಧನಾ, ಶ್ರೇಯಾಂಕ ಪಾಟೀಲ್‌ ಸೇರಿ ಹಲವು ತಾರಾ ಆಟಗಾರ್ತಿಯರು ಸರಣಿಯಲ್ಲಿ ಆಡುವ ನಿರೀಕ್ಷೆ ಇದೆ. ಬೆಂಗಳೂರು ಅಭಿಮಾನಿಗಳಿಂದ ಮಹಿಳಾ ಪ್ರೀಮಿಯರ್‌ ಲೀಗ್‌ (ಮಹಿಳಾ ಐಪಿಎಲ್‌)ಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು.

ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪಂದ್ಯಗಳನ್ನು ವೀಕ್ಷಿಸಿದ್ದರು. ಈ ಸರಣಿಯನ್ನೂ ವೀಕ್ಷಿಸಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ತೆರಳುವ ನಿರೀಕ್ಷೆ ಇದೆ.