ಬಾಜ್‌ಬಾಲ್‌ ಆಟಕ್ಕೆ ಬೆದರದೆ ಗೆದ್ದ ಭಾರತ

| Published : Feb 06 2024, 01:30 AM IST / Updated: Feb 06 2024, 12:21 PM IST

India

ಸಾರಾಂಶ

2ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 106 ರನ್‌ ಭರ್ಜರಿ ಜಯ ದಾಖಲಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ ಈಗ 1-1ರಲ್ಲಿ ಸಮಬಲ ಸಾಧಿಸಿದೆ. 399 ರನ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 292ಕ್ಕೆ ಸರ್ವಪತನ ಕಂಡಿತು. ಬೂಮ್ರಾ, ಅಶ್ವಿನ್‌ಗೆ ತಲಾ 3 ವಿಕೆಟ್‌ ಪಡೆದು ಮಿಂಚಿದ್ದಾರೆ.

ವಿಶಾಖಪಟ್ಟಣಂ: ಇತ್ತೀಚಿನ ದಶಕಗಳಲ್ಲಿ ಭಾರತಕ್ಕೆ ತವರಿನ ಟೆಸ್ಟ್‌ನಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವ ತಂಡಗಳಲ್ಲಿ ಇಂಗ್ಲೆಂಡ್‌ಗೆ ಅಗ್ರಸ್ಥಾನ. ಆದರೆ ಈ ಬಾರಿ ಪ್ರವಾಸಿ ಇಂಗ್ಲೆಂಡ್‌ನ ಬಾಜ್‌ಬಾಲ್‌ ಶೈಲಿಯ ಆಟಕ್ಕೆ ಭಾರತ ಎದೆಯೊಡ್ಡಿ ನಿಂತು ಗೆದ್ದು ಬೀಗಿದೆ. ಸೋಮವಾರ ಮುಕ್ತಾಯಗೊಂಡ 2ನೇ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾ ಪಡೆ 106 ರನ್‌ ಭರ್ಜರಿಗೆಲುವು ಸಾಧಿಸಿತು. 

ಇದರೊಂದಿಗೆ ಹೈದರಾಬಾದ್‌ನಲ್ಲಿ ಎದುರಾಗಿದ್ದ ಆಘಾತಕಾರಿ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ, 5 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿತು.ಗೆಲುವಿಗೆ 399 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌, ಟೀಂ ಇಂಡಿಯಾ ಪಾಳಯದಲ್ಲಿ ಭಯ ಹುಟ್ಟಿಸಲು ಯಶಸ್ವಿಯಾಯಿತಾದರೂ 292ಕ್ಕೆ ಆಲೌಟಾಗಿ ಸೋಲೊಪ್ಪಿಕೊಂಡಿತು. 

ತವರಿನಲ್ಲಿ ಸೋಲೇ ಇಲ್ಲ ಎಂಬಂತೆ ಮೆರೆದಾಡುತ್ತಿದ್ದ ಭಾರತಕ್ಕೆ ಆರಂಭಿಕ ಪಂದ್ಯದಲ್ಲಿ ಸೋಲುಣಿಸಿದ್ದ ಇಂಗ್ಲೆಂಡ್‌ಗೆ ಈ ಬಾರಿ 399 ರನ್‌ ಸವಾಲು ಅಸಾಧ್ಯವೇನೂ ಆಗಿರಲಿಲ್ಲ. ಆದರೆ ವೇಗಿ ಬೂಮ್ರಾರ ನಿಖರ ದಾಳಿ, ಸ್ಪಿನ್ನರ್‌ ಆರ್‌.ಅಶ್ವಿನ್‌ರ ಕೈಚಳಕದ ಮುಂದೆ ಇಂಗ್ಲೆಂಡ್‌ ಬ್ಯಾಟರ್‌ಗಳು ಮಂಡಿಯೂರಲೇಬೇಕಾಯಿತು.

ಕ್ರಾವ್ಲಿ ಅಬ್ಬರ: ಬೃಹತ್‌ ಗುರಿ ಲಭಿಸಿದ ಬಳಿಕ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 67 ರನ್‌ ಗಳಿಸಿದ್ದ ಇಂಗ್ಲೆಂಡ್‌ ಸೋಮವಾರವೂ ಅಬ್ಬರದ ಆಟವಾಡಿತು. 29 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಜ್ಯಾಕ್‌ ಕ್ರಾವ್ಲಿ 4ನೇ ದಿನದ ಮೊದಲ ಅವಧಿಯಲ್ಲಿ ಭಾರತೀಯರಲ್ಲಿ ಭೀತಿ ಹುಟ್ಟಿಸಿದರು. ಆದರೆ 73 ರನ್‌ ಸಿಡಿಸಿ ಕ್ರಾವ್ಲಿ ಪೆವಿಲಿಯನ್‌ಗೆ ಮರಳಿದರು. 

ನೈಟ್‌ ವಾಚ್‌ಮನ್‌ ರೆಹಾನ್‌ ಅಹ್ಮದ್‌ 23 ರನ್‌ ಕೊಡುಗೆ ನೀಡಿದರು.ಓಲಿ ಪೋಪ್‌ 23, ಜೋ ರೂಟ್‌ 16, ಜಾನಿ ಬೇರ್‌ಸ್ಟೋವ್‌ 26, ಬೆನ್‌ ಸ್ಟೋಕ್ಸ್‌ 11 ರನ್‌ ಗಳಿಸಿ ಪೆವಿಲಿಯನ್‌ ಸೇರಿದಾಗ ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿತು. ಆದರೆ ಸತತ ವಿಕೆಟ್‌ ಉರುಳುತ್ತಿದ್ದರೂ ರಕ್ಷಣಾತ್ಮಕ ಆಟಕ್ಕೆ ಜೋತು ಬೀಳದೇ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇಂಗ್ಲೆಂಡ್‌ ಬ್ಯಾಟರ್‌ಗಳು ಕೊನೆವರೆಗೂ ಗೆಲುವಿನ ಆಸೆ ಕೈಬಿಟ್ಟಿರಲಿಲ್ಲ. 

ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಬೆನ್‌ ಫೋಕ್ಸ್‌(36), ಟಾಮ್‌ ಹಾರ್ಟ್ಲಿ(36) ಅವರನ್ನು ಬೂಮ್ರಾ ಔಟ್ ಮಾಡುವ ಮೂಲಕ ಭಾರತಕ್ಕೆ ಗೆಲುವು ಖಚಿತಪಡಿಸಿಕೊಂಡರು.ಬೂಮ್ರಾ, ಅಶ್ವಿನ್‌ ತಲಾ 3 ವಿಕೆಟ್‌ ಪಡೆದರೆ, ಮುಕೇಶ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಚೊಚ್ಚಲ ದ್ವಿಶತಕದ ನೆರವಿನಿಂದ 396 ರನ್‌ ಕಲೆಹಾಕಿದ್ದ ಭಾರತ, ಇಂಗ್ಲೆಂಡನ್ನು 253ಕ್ಕೆ ನಿಯಂತ್ರಿಸಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್‌ ಗಿಲ್‌ ಶತಕದಾಟದಿಂದಾಗಿ ಭಾರತ 255 ರನ್‌ ಸಿಡಿಸಿ ಪ್ರವಾಸಿ ತಂಡಕ್ಕೆ ದೊಡ್ಡ ಟಾರ್ಗೆಟ್‌ ನಿಗದಿಪಡಿಸಿತ್ತು.

ಸ್ಕೋರ್‌: ಭಾರತ 396/10 ಮತ್ತು 255/10, ಇಂಗ್ಲೆಂಡ್‌ 253/10 ಮತ್ತು 292/10 (ಕ್ರಾವ್ಲಿ 73, ಹಾರ್ಟ್ಲಿ 36, ಫೋಕ್ಸ್‌ 35, ಬೂಮ್ರಾ 3-46, ಅಶ್ವಿನ್‌ 3-72) ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬೂಮ್ರಾ.

70 ಓವರಲ್ಲಿ ಗೇಲ್ತೇವೆಎಂದಿದ್ದ ಆ್ಯಂಡರ್‌ಸನ್!
ಭಾನುವಾರದ ಆಟ ಕೊನೆಗೊಂಡ ಬಳಿಕ ಮಾತನಾಡಿದ್ದ ಇಂಗ್ಲೆಂಡ್‌ ವೇಗಿ ಆ್ಯಂಡರ್‌ಸನ್‌, ಪಂದ್ಯದಲ್ಲಿ 180 ಓವರ್‌ ಬಾಕಿ ಇದ್ದರೂ ನಾವು 60-70 ಓವರಲ್ಲೇ ಗೆಲ್ಲಲು ಪ್ರಯತ್ನಿಸುತ್ತೇವೆ. ನಮ್ಮ ಆಟದ ಶೈಲಿಯೇ ಅದು ಎಂದಿದ್ದರು. ಆ್ಯಂಡರ್‌ಸನ್‌ ಹೇಳಿದಂತೆ ಇಂಗ್ಲೆಂಡ್‌ ಬೇಗನೇ ಪಂದ್ಯ ಮುಗಿಸಲು ಪ್ರಯತ್ನಿಸಿದರೂ ಗೆಲುವು ಸಿಗಲಿಲ್ಲ. ತಂಡ 69.2 ಓವರ್‌ಗಳಲ್ಲೇ ಇನ್ನಿಂಗ್ಸ್‌ ಮುಕ್ತಾಯಗೊಳಿಸಿತು.

ಧೋನಿಯನ್ನು ಹಿಂದಿಕ್ಕಿದ ರೋಹಿತ್‌: ಭಾರತದ ಪರ ಅತಿ ಹೆಚ್ಚು ಪಂದ್ಯ ಗೆದ್ದವರ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ಅವರು ಎಂ.ಎಸ್‌.ಧೋನಿಯನ್ನು ಹಿಂದಿಕ್ಕಿದ್ದಾರೆ. ಧೋನಿ ಭಾರತ ಗೆದ್ದಿರುವ 295 ಪಂದ್ಯಗಳಲ್ಲಿ ತಂಡದ ಭಾಗವಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಗೆದ್ದ ಪಂದ್ಯ ರೋಹಿತ್ ಪಾಲಿಗೆ 296 ನೇ ಪಂದ್ಯ. ವಿರಾಟ್‌ ಕೊಹ್ಲಿ 313, ಸಚಿನ್‌ ತೆಂಡುಲ್ಕರ್‌ 307 ಪಂದ್ಯಗಳಲ್ಲಿ ಗೆದ್ದಿದ್ದಾರೆ.

ಚಂದ್ರಶೇಖರ್‌ ದಾಖಲೆಮುರಿದ ಆರ್‌.ಅಶ್ವಿನ್‌!
ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಕಿತ್ತ ಭಾರತೀಯರ ಪಟ್ಟಿಯಲ್ಲಿ ಆರ್‌.ಅಶ್ವಿನ್‌ ಅಗ್ರಸ್ಥಾನಕ್ಕೇರಿದ್ದಾರೆ. 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಪಡೆದ ಅಶ್ವಿನ್‌, ವಿಕೆಟ್‌ ಗಳಿಕೆಯನ್ನು 97ಕ್ಕೆ ಏರಿಸಿದರು. ಲೆಗ್‌ ಸ್ಪಿನ್ನರ್‌ ಭಾಗವತ್‌ ಚಂದ್ರಶೇಖರ್‌ 95 ವಿಕೆಟ್‌ ಪಡೆದಿದ್ದರು. ಇನ್ನು, ಅನಿಲ್‌ ಕುಂಬ್ಳೆ 92, ಬಿಶನ್‌ ಸಿಂಗ್‌ ಬೇಡಿ ಹಾಗೂ ಕಪಿಲ್‌ ದೇವ್‌ ತಲಾ 85 ವಿಕೆಟ್‌ ಕಿತ್ತಿದ್ದಾರೆ.

02ನೇ ಗರಿಷ್ಠ: ಇಂಗ್ಲೆಂಡ್‌ ಗಳಿಸಿದ 292 ರನ್‌ ಭಾರತದಲ್ಲಿ ಪ್ರವಾಸಿ ತಂಡವೊಂದರ 4ನೇ ಇನ್ನಿಂಗ್ಸ್‌ನ 2ನೇ ಗರಿಷ್ಠ ಮೊತ್ತ. 2017ರಲ್ಲಿ ಶ್ರೀಲಂಕಾ 5 ವಿಕೆಟ್‌ಗೆ 299 ರನ್‌ ಗಳಿಸಿದ್ದು ಈಗಲೂ ಗರಿಷ್ಠ.

03ನೇ ಗೆಲುವು: ಭಾರತ ತಂಡ ವಿಶಾಖಪಟ್ಟಣಂನಲ್ಲಿ ಆಡಿದ 3ನೇ ಪಂದ್ಯದಲ್ಲೂ ಗೆಲುವು ಸಾಧಿಸಿತು. ಈ ಮೊದಲು ದ.ಆಫ್ರಿಕಾ, ಇಂಗ್ಲೆಂಡ್‌ ವಿರುದ್ಧ ಗೆದ್ದಿತ್ತು.