ಇಂದು ವಿಶ್ವ 10K ಬೆಂಗಳೂರು ಮ್ಯಾರಥಾನ್‌: 28000+ ಮಂದಿ ಭಾಗಿ

| Published : Apr 28 2024, 01:18 AM IST / Updated: Apr 28 2024, 04:14 AM IST

ಸಾರಾಂಶ

ವಿಶ್ವದ ಅಗ್ರ ಅಥ್ಲೀಟ್ಸ್‌ಗಳು ಮ್ಯಾರಥಾನ್‌ನಲ್ಲಿ ಭಾಗಿ. ವರ್ಚುವಲ್ ಆಗಿಯೂ 1500ರಷ್ಟು ಮಂದಿ ಭಾಗಿ. ಹಲವು ವಿಭಾಗಗಳಲ್ಲಿ ಓಟದ ಸ್ಪರ್ಧೆ.

 ಬೆಂಗಳೂರು :  6ನೇ ಆವೃತ್ತಿಯ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ ಓಟ ಭಾನುವಾರ ನಡೆಯಲಿದ್ದು, ವಿಶ್ವದ ಅಗ್ರ ಓಟಗಾರರು ಸೇರಿ ಒಟ್ಟು 28000 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವರ್ಚುವಲ್ ಆಗಿಯೂ 1500ರಷ್ಟು ಮಂದಿ ಭಾಗಿಯಾಗಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. 

ಮುಕ್ತ 10ಕೆ, ವಿಶ್ವ 10ಕೆ ಪುರುಷ ಹಾಗೂ ಮಹಿಳಾ, ಮಜಾ ರನ್‌(5.5 ಕಿ.ಮೀ), ಸಿಲ್ವರ್ ರನ್‌(2.6 ಕಿ.ಮೀ.) ಹಾಗೂ ವಿಶೇಷ ಚೇತನ(2.6 ಕಿ.ಮೀ) ವಿಭಾಗಗಳಲ್ಲಿ ಓಟದ ಸ್ಪರ್ಧೆಗಳು ನಡೆಯಲಿದೆ. ಬಹುತೇಕ ಎಲ್ಲಾ ಸ್ಪರ್ಧೆಗಳು ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಶಾ ಪರೇಡ್‌ ಕ್ರೀಡಾಂಗಣದಲ್ಲಿ ಆರಂಭಗೊಂಡು, ಅಲ್ಲೇ ಕೊನೆಗೊಳ್ಳಲಿದೆ.2 ಬಾರಿ ಒಲಿಂಪಿಕ್ಸ್‌, 4 ಬಾರಿ ವಿಶ್ವ ಚಾಂಪಿಯನ್‌ಶಿಪ್‌ ಚಿನ್ನದ ಪದಕ ವಿಜೇತ ಶಾಟ್‌ಪುಟ್‌ ಪಟು ನ್ಯೂಜಿಲೆಂಡ್‌ನ ವೆಲೇರಿ ಆ್ಯಡ್ಸಂ ಮ್ಯಾರಥಾನ್‌ ರಾಯಭಾರಿಯಾಗಿದ್ದಾರೆ.

ವಿಶ್ವ 10ಕೆ ವಿಭಾಗದಲ್ಲಿ ಅಗ್ರ ಓಟಗಾರರಾದ ಕೀನ್ಯಾದ ಎಮ್ಯಾಕುಲೇಟ್‌ ಅಕೋಲ್‌, ಪೀಟರ್ ಮ್ವಾನಿಕಿ, ಬ್ರೆವಿನ್‌ ಕಿಪ್ಟೂ, ಬ್ರೆವಿನ್‌ ಕಿಪ್‌ರೊಪ್‌, ಎಥಿಯೋಪಿಯಾದ ಲೆಮ್‌ಲಮ್‌ ಹೈಲು, ಕೀನ್ಯಾದ ಲಿಲಿಯನ್‌ ಕಸಾಟ್‌ ಪಾಲ್ಗೊಳ್ಳಲಿದ್ದಾರೆ.ಭಾರತದ ತಾರಾ ಅಥ್ಲೀಟ್‌ಗಳಾದ ತಾಮ್ಶಿ ಸಿಂಗ್‌, ಹರ್ಮ್‌ನ್‌ಜೋತ್‌ ಸಿಂಗ್‌, ಸಾವನ್‌ ಬರ್ವಾಲ್‌, ಸಂಜೀವಿನಿ ಜಾಧವ್‌ ಸೇರಿದಂತೆ ಪ್ರಮುಖರು ರೇಸ್‌ನ ಪ್ರಮುಖ ಆರ್ಕಷಣೆ ಎನಿಸಿಕೊಂಡಿದ್ದಾರೆ.ವಿಶ್ವದ ಅಥ್ಲೀಟ್‌ಗಳ ರೇಸ್‌ನಲ್ಲಿ ಗೆಲ್ಲುವವರಿಗೆ 26000 ಅಮೆರಿಕನ್‌ ಡಾಲರ್‌(ಸುಮಾರು 21 ಲಕ್ಷ ರು.), ಭಾರತೀಯರ ರೇಸ್‌ನಲ್ಲಿ ಚಾಂಪಿಯನ್‌ ಆಗುವ ಅಥ್ಲೀಟ್ಸ್‌ಗೆ 2,75,000 ರು. ನಗದು ಬಹುಮಾನ ಲಭಿಸಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.