ಸಾರಾಂಶ
ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಆಟಗಾರರ ಮೊದಲ ಬ್ಯಾಚ್ ಅಮೆರಿಕಕ್ಕೆ ತೆರಳಿತು. ನಾಯಕ ರೋಹಿತ್, ರಿಷಭ್ ಪಂತ್, ಸೂರ್ಯಕುಮಾರ್, ಸಿರಾಜ್, ಬೂಮ್ರಾ, ಕುಲ್ದೀಪ್, ಜಡೇಜಾ, ದುಬೆ ಹಾಗೂ ಸಹಾಯಕ ಸಿಬ್ಬಂದಿ ಶನಿವಾರ ರಾತ್ರಿ ಅಮೆರಿಕಕ್ಕೆ ಪ್ರಯಾಣಿಸಿತು.
ಸಂಜು ಸ್ಯಾಮ್ಸನ್, ಜೈಸ್ವಾಲ್, ಚಹಲ್, ಅಕ್ಷರ್ ಪಟೇಲ್ ಸೇರಿದಂತೆ ಇತರರನ್ನೊಳಗೊಂಡ 2ನೇ ತಂಡ ಸೋಮವಾರ ಅಮೆರಿಕದ ವಿಮಾನವೇರಲಿದೆ. ಹಾರ್ದಿಕ್ ಪಾಂಡ್ಯ ಸದ್ಯ ಲಂಡನ್‌ನಲ್ಲಿದ್ದು, ಅಲ್ಲಿಂದಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರತ ತಂಡ ಜೂ.5ಕ್ಕೆ ಐರ್ಲೆಂಡ್ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.
ವಿಶ್ವ ಪ್ಯಾರಾ ಅಥ್ಲೆಟಿಕ್ಸ್: 17 ಪದಕ ಗೆದ್ದ ಭಾರತ
ಕೋಬೆ(ಜಪಾನ್): ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ 17 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನವಾದ ಶನಿವಾರ ಭಾರತ ಸಿಮ್ರಾನ್ ಶರ್ಮಾ 200 ಮೀ. ರೇಸ್‌ನಲ್ಲಿ 24.95 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಭಾರತ 6 ಚಿನ್ನ, 5 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಜಯಿಸಿ, ಪದಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿತು. 2023ರಲ್ಲಿ 3 ಚಿನ್ನ ಸೇರಿ 10 ಪದಕ ಗೆದ್ದಿದ್ದು ಭಾರತದ ಈ ವರೆಗಿನ ದಾಖಲೆಯಾಗಿತ್ತು. ಚೀನಾ 33 ಚಿನ್ನ ಸೇರಿ 87 ಪದಕಗಳೊಂದಿಗೆ ಅಗ್ರಸ್ಥಾನ ಪಡೆಯಿತು.