ಸಾರಾಂಶ
ಮ್ಯಾಂಚೆಸ್ಟರ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟಿಗರು ಭಾನುವಾರ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಎಫ್‌ಸಿ ಆಟಗಾರರ ಜೊತೆ ಅಪರೂಪದ ಕ್ಷಣಗಳನ್ನು ಕಳೆದರು. ಈ ಎರಡೂ ತಂಡಗಳಿಗೂ ಅಡಿಡಾಸ್ ಸಂಸ್ಥೆ ಕಿಟ್ ಪ್ರಾಯೋಜಕತ್ವ ಹೊಂದಿದೆ.
ಭಾರತೀಯ ಕ್ರಿಕೆಟಿಗರು ಮ್ಯಾಂಚೆಸ್ಟರ್ ತಂಡದ ಜೆರ್ಸಿಗಳನ್ನು ಧರಿಸಿ ಫುಟ್ಬಾಲ್ ಆಡಿದರೆ, ಮ್ಯಾಂಚೆಸ್ಟರ್ ಆಟಗಾರರು ಭಾರತದ ಜೆರ್ಸಿ ಧರಿಸಿ ಕ್ರಿಕೆಟ್ ಆಡಿದರು. ಪರಸ್ಪರ ಜೆರ್ಸಿ ಬದಲಿಸಿ, ಮಾತುಕತೆ, ತಮಾಷೆ, ನಗು, ಆಟದ ಮೂಲಕ ಸಮಯ ಕಳೆದರು. ರಿಷಭ್ ಪಂತ್ ಖ್ಯಾತ ಫುಟ್ಬಾಲಿಗ ಬ್ರುನೊ ಫೆರ್ನಾಂಡಿಸ್‌ಗೆ ಕ್ರಿಕೆಟ್ ಬ್ಯಾಟ್ ಉಡುಗೊರೆಯಾಗಿ ನೀಡಿದರು. ಭಾರತದ ಕೋಚ್ ಗಂಭೀರ್, ಮ್ಯಾಂಚೆಸ್ಟರ್ ಮ್ಯಾನೇಜರ್ ರುಬೇನ್ ಅಮೋರಿಮ್ ಹಾಗೂ ತಾರಾ ಆಟಗಾರರು ಇದ್ದರು.
ಇಂಗ್ಲೆಂಡ್ ಟೆಸ್ಟ್ ಸರಣಿ: ಭಾರತ ತಂಡಕ್ಕೆ ಯುವ ವೇಗಿ ಅನ್ಶುಲ್ ಸೇರ್ಪಡೆ
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಲು ಭಾರತ ತಂಡಕ್ಕೆ ಯುವ ವೇಗಿ ಅನ್ಶುಲ್ ಕಂಬೋಜ್ ಸೇರ್ಪಡೆಗೊಂಡಿದ್ದಾರೆ. ಆಕಾಶ್‌ದೀಪ್ ಹಾಗೂ ಅರ್ಶ್‌ದೀಪ್ ಸಿಂಗ್ ಗಾಯಗೊಂಡ ಕಾರಣ ಹರ್ಯಾಣದ ವೇಗಿಗೆ ಮಣೆ ಹಾಕಲಾಗಿದೆ.
ಆಕಾಶ್‌ದೀಪ್ ತೊಡೆಸಂಧು ನೋವಿನಿಂದ ಬಳಲುತ್ತಿದ್ದು, ಅರ್ಶ್‌ದೀಪ್ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರೂ 4ನೇ ಟೆಸ್ಟ್ ಪಂದ್ಯದ ಆಯ್ಕೆಗೆ ಲಭ್ಯವಿರುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ 24 ವರ್ಷದ ಅನ್ಶುಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್ ಕಬಳಿಸಿ ಮಿಂಚಿದ್ದ ಅನ್ಶುಲ್, ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ‘ಎ’ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಕಳೆದ ಋತುವಿನ ರಣಜಿಯಲ್ಲಿ 6 ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದರು.