ಸಾರಾಂಶ
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹ ತೂಕ ಹೆಚ್ಚಾಗಿದೆ. ಅವರೊಬ್ಬ ಭಾರತ ಕಂಡ ಅತ್ಯಂತ ಕಳಪೆ ಕಪ್ತಾನ ಎಂದು ಹೇಳಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್ ವಿವಾದಿತ ಹೇಳಿಕೆ ನೀಡಿದ್ದಾರೆ.
ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿರುವ ಹೊತ್ತಿನಲ್ಲೇ, ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹ ತೂಕ ಹೆಚ್ಚಾಗಿದೆ. ಅವರೊಬ್ಬ ಭಾರತ ಕಂಡ ಅತ್ಯಂತ ಕಳಪೆ ಕಪ್ತಾನ ಎಂದು ಹೇಳಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಅತ್ತ ತೃಣಮೂಲ ಕಾಂಗ್ರೆಸ್‌ನ ಸಂಸದ ಸುಗತಾ ರಾಯ್ ಕೂಡಾ ಶಮಾ ಹೇಳಿಕೆ ಬೆಂಬಲಿಸಿದ್ದು, ‘ಅವರು ಹೇಳಿದ್ದರಲ್ಲಿ ತಪ್ಪೇನಿದೆ? ರೋಹಿತ್ ಶರ್ಮಾ ಸಾಧನೆ ಉತ್ತಮವಾಗಿಲ್ಲ, ಅವರು ತಂಡದಲ್ಲಿ ಇರಬಾರದು’ ಎಂದು ಕಾಂಗ್ರೆಸ್ ನಾಯಕಿಗೆ ಧ್ವನಿಗೂಡಿಸಿದ್ದಾರೆ.
ಈ ಹೇಳಿಕೆಯನ್ನು ಮಾಜಿ ಕ್ರಿಕೆಟಿಗರು, ಬಿಜೆಪಿ ನಾಯಕರಾದಿಯಾಗಿ ಹಲವರು ಕಟುವಾಗಿ ಟೀಕಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್, ಟ್ವೀಟ್ ಅಳಿಸುವಂತೆ ಶಮಾಗೆ ಸೂಚಿಸಿದೆ. ಅಲ್ಲದೆ ಇದು ಅವರ ವೈಯಕ್ತಿಕ ಹೇಳಿಕೆ ಎಂದು ತಾನು ದೂರ ಸರಿದಿದೆ. ಅದರ ಬೆನ್ನಲ್ಲೇ ಶಮಾ ತಮ್ಮ ಟ್ವೀಟ್ ಅಳಿಸಿ ಹಾಕಿದ್ದಾರೆ.
ಶಮಾ ಹೇಳಿದ್ದೇನು?
ಎಕ್ಸ್‌ನಲ್ಲಿ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯಿಸಿದ್ದ ಶಮಾ ಮೊಹಮ್ಮದ್ ಅವರು, ‘ಕ್ರೀಡಾಪಟುವಾಗಿ ರೋಹಿತ್ ಶರ್ಮಾ ಅವರು ಅಧಿಕ ತೂಕ ಹೊಂದಿದ್ದಾರೆ. ಅವರು ತಮ್ಮ ತೂಕ ಇಳಿಸಿಕೊಳ್ಳಬೇಕಿದೆ. ಅಲ್ಲದೆ, ಅವರೊಬ್ಬ ಭಾರತ ಕಂಡ ಕಳಪೆ ಕ್ಯಾಪ್ಟನ್. ಹಿಂದಿನ ನಾಯಕರಾದ ಸೌರವ್, ಸಚಿನ್, ರಾಹುಲ್, ಧೋನಿ, ಕೊಹ್ಲಿ, ಕಪಿಲ್, ರವಿಶಾಸ್ತ್ರಿಗೆ ಹೋಲಿಸಿದರೆ ರೋಹಿತ್ ಶರ್ಮಾ ಅವರನ್ನು ವಿಶ್ವದರ್ಜೆಯ ಆಟಗಾರ ಎಂದು ಹೊಗಳುವಂಥ ಅಂಶ ಏನಿದೆ’ ಎಂದು ಹೇಳಿದ್ದರು.
ಜೊತೆಗೆ ವಿವಾದದ ಬಳಿಕ ತಮ್ಮ ಹಳೆಯ ಟ್ವೀಟ್ ಅಳಿಸಿ ‘ನನಗೆ ಶರ್ಮಾ ಬಗ್ಗೆ ಹೆಮ್ಮೆಯಿದೆ. ಅವರ ಫಿಟ್‌ನೆಸ್ ಬಗ್ಗೆ ಮಾತಾಡುತ್ತಿದ್ದೆ’ ಎಂದು ತೇಪೆ ಹಚ್ಚಲು ಯತ್ನಿಸಿದ್ದಾರೆ.==
ಬಿಜೆಪಿ ಕೆಂಡಾಮಂಡಲ
ಶಮಾ ಹೇಳಿಕೆ ಬಗ್ಗೆ ಕಿಡಿಕಾರಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ 90 ಚುನಾವಣೆಯಲ್ಲಿ ಸೋತಿದೆ. ಚಾಂಪಿಯನ್ ಟ್ರೋಫಿಯಲ್ಲಿ ಆಡುತ್ತಿರುವ ನಮ್ಮ ತಂಡಕ್ಕೆ ಬೆಂಬಲ ನೀಡುವ ತಂಡದ ನಾಯಕನನ್ನು ಟೀಕಿಸಲಾಗುತ್ತಿದೆ. ಇದು ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ನೈತಿಕತೆ ಕುಸಿಯುವಂತೆ ಮಾಡುವ ಪೂರ್ವಯೋಜಿತ ಪ್ರಯತ್ನ’ ಎಂದಿದ್ದಾರೆ.
ಹೇಳಿಕೆ ದುರದೃಷ್ಟಕರ: ಬಿಸಿಸಿಐ
ಶಮಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ನಮ್ಮ ತಂಡ ಐಸಿಸಿ ಪಂದ್ಯಾವಳಿಯಲ್ಲಿ ಭಾಗವಹಿಸಿ, ಸೆಮಿ ಪೈನಲ್ ಪ್ರವಶಿಸಿರುವ ಹೊತ್ತಿನಲ್ಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಂಡದ ನಾಯಕನ ಬಗ್ಗೆ ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ. ಎಲ್ಲಾಟಾಟಗಾರರು ತಮ್ಮ ಸಾಮರ್ಥ್ಯಾನುಸಾರ ಪ್ರದರ್ಶನ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ.