ಚಾಂಪಿಯನ್ಸ್‌ ಟ್ರೋಫಿಗೆ ಇಂದು ಭಾರತ ತಂಡ ಘೋಷಣೆ : ರೋಹಿತ್‌ ಶರ್ಮಾ ನಾಯಕತ್ವ ಖಚಿತ

| Published : Jan 18 2025, 12:46 AM IST / Updated: Jan 18 2025, 04:15 AM IST

ಸಾರಾಂಶ

ಟೂರ್ನಿಗೆ ರೋಹಿತ್‌ ನಾಯಕ. ಖಚಿತಪಡಿಸಿದ ಬಿಸಿಸಿಐ. ರೋಹಿತ್‌ ಶರ್ಮಾ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ತಂಡವನ್ನು ಘೋಷಿಸಲಿದ್ದಾರೆ ಎಂದು ಬಿಸಿಸಿಐ ಶುಕ್ರವಾರ ಮಾಹಿತಿ ನೀಡಿದೆ.

ನವದೆಹಲಿ: ಫೆ.6ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ ಫೆ.19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಶನಿವಾರ ಭಾರತ ತಂಡ ಪ್ರಕಟಗೊಳ್ಳಲಿದೆ.

 ನಾಯಕ ರೋಹಿತ್‌ ಶರ್ಮಾ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ತಂಡವನ್ನು ಘೋಷಿಸಲಿದ್ದಾರೆ ಎಂದು ಬಿಸಿಸಿಐ ಶುಕ್ರವಾರ ಮಾಹಿತಿ ನೀಡಿದೆ. ಈ ಮೂಲಕ ಇಂಗ್ಲೆಂಡ್‌ ಸರಣಿ ಹಾಗೂ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡವನ್ನು ರೋಹಿತ್‌ ಅವರೇ ಮುನ್ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ. 

ಚಾಂಪಿಯನ್ಸ್‌ ಟ್ರೋಫಿಗೆ ಜ.12ರಂದು ತಂಡ ಪ್ರಕಟಿಸಲು ಎಲ್ಲಾ ತಂಡಗಳಿಗೆ ಐಸಿಸಿ ಗಡುವು ವಿಧಿಸಿತ್ತು. ಆದರೆ ಭಾರತ ತಂಡ ಒಂದು ವಾರ ಹೆಚ್ಚು ಕಾಲಾವಕಾಶ ಕೋರಿತ್ತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲ ತಂಡಗಳು ಈಗಾಗಲೇ ತಂಡ ಪ್ರಕಟಿಸಿವೆ. ಟೂರ್ನಿಯಲ್ಲಿ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಸಾತ್ವಿಕ್-ಚಿರಾಗ್‌ ಸೆಮೀಸ್‌ಗೆ: ಸಿಂಧು, ಕಿರಣ್‌ ಜಾರ್ಜ್‌ ಔಟ್‌

ನವದೆಹಲಿ: ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಾತ್ವಿಕ್-ಚಿರಾಗ್‌ ಶೆಟ್ಟಿ ಜೋಡಿ ಸೆಮಿಫೈನಲ್‌ ಪ್ರವೇಶಿಸಿದೆ. ಆದರೆ ತಾರಾ ಶಟ್ಲರ್‌ ಪಿ.ವಿ.ಸಿಂಧು ಸೋತು ಹೊರಬಿದ್ದಿದ್ದಾರೆ.

ಶುಕ್ರವಾರ ನಡೆದ ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತೀಯ ಜೋಡಿ ಕೊರಿಯಾದ ಜಿನ್‌ ಯೊಂಗ್‌-ಕಾಂಗ್‌ ಮಿನ್‌ ಹ್ಯುಕ್‌ ವಿರುದ್ಧ 21-10, 21-17ರಲ್ಲಿ ಗೆಲುವು ಸಾಧಿಸಿತು. ಪಂದ್ಯ ಕೇವಲ 41 ನಿಮಿಷಗಳಲ್ಲೇ ಕೊನೆಗೊಂಡಿತು. ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಮಾಜಿ ಚಾಂಪಿಯನ್‌ ಸಿಂಧು, ಇಂಡೋನೇಷ್ಯಾದ ಗ್ರೆಗೋರಿಯಾ ಮಾರಿಸ್ಕಾ ವಿರುದ್ಧ 9-21, 21-19, 17-21ರಲ್ಲಿ ಸೋಲನುಭವಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಕಿರಣ್‌ ಜಾರ್ಜ್‌ ಚೀನಾದ ಹಾಂಗ್‌ ಯಂಗ್‌ ವೆಂಗ್‌ ವಿರುದ್ಧ 13-21, 19-21 ನೇರ ಗೇಮ್‌ಗಳಲ್ಲಿ ಸೋತು ಹೊರಬಿದ್ದರು.