ಬಾರ್ಬಡೊಸ್‌ನಲ್ಲಿ ಚಂಡಮಾರುತಕ್ಕೆ ಸಿಲುಕಿದ ಟೀಂ ಇಂಡಿಯಾ ಆಟಗಾರರು!

| Published : Jul 02 2024, 01:32 AM IST / Updated: Jul 02 2024, 04:29 AM IST

ಬಾರ್ಬಡೊಸ್‌ನಲ್ಲಿ ಚಂಡಮಾರುತಕ್ಕೆ ಸಿಲುಕಿದ ಟೀಂ ಇಂಡಿಯಾ ಆಟಗಾರರು!
Share this Article
  • FB
  • TW
  • Linkdin
  • Email

ಸಾರಾಂಶ

ಬಾರ್ಬಡೊಸ್‌ನಿಂದ ವಿಮಾನ ಹಾರಾಟ ಸ್ಥಗಿತ. ವಾತಾವರಣ ಸಹಜ ಸ್ಥಿತಿಗೆ ಬಂದ ಕೂಡಲೇ ಖಾಸಗಿ ವಿಮಾನದ ಮೂಲಕ ಆಟಗಾರರನ್ನು ಭಾರತಕ್ಕೆ ಕರೆತರಲು ಬಿಸಿಸಿಐ ಪ್ಲ್ಯಾನ್‌.

ಬಾರ್ಬಡೊಸ್: ಟಿ20 ವಿಶ್ವಕಪ್‌ ವಿಜೇತ ಭಾರತ ತಂಡ ಚಂಡಮಾರುತದಿಂದಾಗಿ ಬಾರ್ಬಡೊಸ್‌ನಲ್ಲೇ ಬಾಕಿಯಾಗಿದ್ದು, ತವರಿಗೆ ಮರಳುವುದು ವಿಳಂಬವಾಗಿದೆ.

ಬಾರ್ಬಡೊಸ್‌ನಲ್ಲಿ ಶನಿವಾರ ಫೈನಲ್‌ ಪಂದ್ಯ ನಡೆದಿದ್ದು, ಅಂದೇ ರಾತ್ರಿ ತಂಡದ ಆಟಗಾರರು ಭಾರತಕ್ಕೆ ಮರಳಬೇಕಿತ್ತು. ಆದರೆ ಬಾರ್ಬಡೊಸ್​ನಲ್ಲಿ ಭಾರೀ ಬಿರುಗಾಳಿ ಜೊತೆ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಸೇರಿದಂತೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

 ವಿಮಾನ ಹಾರಾಟ ಕೂಡಾ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಭಾರತೀಯ ಆಟಗಾರರು ಹೋಟೆಲ್‌ನಲ್ಲೇ ಉಳಿದುಕೊಂಡಿದ್ದಾರೆ. ಜಯ್‌ ಶಾ ಸೇರಿದಂತೆ ಬಿಸಿಸಿಐ ಅಧಿಕಾರಿಗಳು ಕೂಡಾ ಬಾರ್ಬಡೊಸ್‌ನಲ್ಲೇ ಬಾಕಿಯಾಗಿದ್ದಾರೆ. ವಾತಾವರಣ ಸಹಜ ಸ್ಥಿತಿಗೆ ಬಂದ ಕೂಡಲೇ ಖಾಸಗಿ ವಿಮಾನದ ಮೂಲಕ ಆಟಗಾರರನ್ನು ಭಾರತಕ್ಕೆ ಕರೆತರಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಭಾರತ ತಂಡಕ್ಕೆ ಪಾರ್ಲಿಮೆಂಟ್‌ನಲ್ಲಿ ಅಭಿನಂದನೆ

ನವದೆಹಲಿ: ಟಿ20 ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ಸೋಮವಾರ ಸಂಸತ್‌ನ ಉಭಯ ಸದನಗಳಲ್ಲಿ ಅಭಿನಂದನೆ ಸಲ್ಲಿಸಲಾಯಿತು.ಲೋಕಸಭೆಯಲ್ಲಿ ಮಾತನಾಡಿದ ಸ್ಪೀಕರ್‌ ಓಂ ಬಿರ್ಲಾ, ‘ದೇಶದ ಯುವಕರು ಮತ್ತು ಕ್ರೀಡಾಪಟುಗಳು ಈ ಗೆಲುವಿನಿಂದ ಸ್ಫೂರ್ತಿ ಪಡೆಯಲಿದ್ದಾರೆ. 

ವಿಶ್ವಕಪ್‌ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಅಭಿನಂದನೆಗಳು’ ಎಂದರು. ಇದೇ ವೇಳೆ ರಾಜ್ಯಸಭೆಯಲ್ಲಿ ಸ್ಪೀಕರ್‌ ಜಗ್‌ದೀಪ್‌ ಧನ್‌ಕರ್‌ ಕೂಡಾ ಭಾರತೀಯ ಆಟಗಾರರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು. ‘ಇಂತಹ ಐತಿಹಾಸಿಕ ಸಾಧನೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊಡ್ಡ ಕನಸು ಕಾಣಲು, ಬದ್ಧತೆಯಿಂದ ಕೆಲಸ ಮಾಡಲು ಮತ್ತು ಶ್ರೇಷ್ಠವಾದುದನ್ನು ಸಾಧಿಸಲು ಪ್ರೇರೇಪಿಸುತ್ತದೆ’ ಎಂದು ಹೇಳಿದರು. ಜೊತೆಗೆ ದಕ್ಷಿಣ ಆಫ್ರಿಕಾ ಆಟಗಾರರ ಹೋರಾಟದ ಮನೋಭಾವವನ್ನೂ ಕೊಂಡಾಡಿದರು.