ಕೆಕೆಆರ್‌ vs ರಾಜಸ್ಥಾನ ಪಂದ್ಯ ಮಳೆಗೆ ಆಹುತಿ!

| Published : May 20 2024, 01:31 AM IST / Updated: May 20 2024, 04:38 AM IST

ಸಾರಾಂಶ

ಒಂದೂ ಎಸೆತ ಕಾಣದೆ ರದ್ದಾದ ಪಂದ್ಯ. ಹೀಗಾಗಿ ತಲಾ ಒಂದಂಕ ಹಂಚಿಕೊಂಡ ಇತ್ತಂಡಗಳು. ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ರಾಜಸ್ಥಾನ.

ಗುವಾಹಟಿ: ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವೆ ನಿಗದಿಯಾಗಿದ್ದ 17ನೇ ಆವೃತ್ತಿಯ ಐಪಿಎಲ್‌ನ ಲೀಗ್‌ ಹಂತದ ಕೊನೆ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಇದರಿಂದಾಗಿ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು.

ಭಾನುವಾರ ಗುವಾಹಟಿಯಲ್ಲಿ ಪಂದ್ಯ ನಿಗದಿಯಾಗಿತ್ತು. ಆದರೆ ಭಾರಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ಪಂದ್ಯ ರದ್ದುಗೊಂಡಿತು. ಸಂಜೆಯಿಂದಲೇ ಮಳೆ ಸುರಿಯುತ್ತಿದ್ದ ಕಾರಣ ಮೈದಾನ ಒದ್ದೆಯಾಗಿತ್ತು. 

ರಾತ್ರಿ 10 ಗಂಟೆ ಬಳಿಕ ಮಳೆ ಬಿಡುವು ನೀಡಿದ ಕಾರಣ 10.30ರ ವೇಳೆಗೆ ಟಾಸ್‌ ನಡೆಯಿತು. ಟಾಸ್‌ ಗೆದ್ದ ಕೋಲ್ಕತಾ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಆದರೆ ಮತ್ತೆ ಮಳೆ ಸುರಿದ ಕಾರಣ ಪಂದ್ಯ ಆರಂಭಗೊಳ್ಳಲಿಲ್ಲ. ಹೀಗಾಗಿ 10.50ರ ವೇಳೆಗೆ ಪಂದ್ಯವನ್ನು ರದ್ದುಗೊಳಿಸಲು ಮ್ಯಾಚ್‌ ರೆಫ್ರಿಗಳು ನಿರ್ಧರಿಸಿದರು. 

ಕೋಲ್ಕತಾ 14 ಪಂದ್ಯಗಳಲ್ಲಿ 20 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರೆ, ಸತತ 4 ಪಂದ್ಯಗಳಲ್ಲಿ ಸೋಲನುಭವಿಸಿದ್ದ ರಾಜಸ್ಥಾನ 14 ಪಂದ್ಯಗಳಲ್ಲಿ 17 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿಯಿತು. ನೆಟ್‌ ರನ್‌ರೇಟ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಮುಂದಿದ್ದ ಕಾರಣ 2ನೇ ಸ್ಥಾನಕ್ಕೇರಿತು.

3ನೇ ಬಾರಿ ಪಂದ್ಯ ಮಳೆಗೆ ಬಲಿ

ಈ ಬಾರಿ ಐಪಿಎಲ್‌ನಲ್ಲಿ 3ನೇ ಬಾರಿ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಮೇ 13ರಂದು ಗುಜರಾತ್‌ ಹಾಗೂ ಕೆಕೆಆರ್‌ ನಡುವಿನ ಪಂದ್ಯ ಹಾಗೂ ಮೇ 16ರಂದು ಗುಜರಾತ್‌ ಹಾಗೂ ಹೈದರಾಬಾದ್‌ ನಡುವಿನ ಪಂದ್ಯ ಕೂಡಾ ಮಳೆಗೆ ಆಗುತಿಯಾಗಿತ್ತು.