ಬೆಂಗಳೂರಿನ ಬಿಗ್‌ರಾಕ್ ಸೂಪರ್‌ಕ್ರಾಸ್‌ ಲೀಗ್‌ ಚಾಂಪಿಯನ್‌

| Published : Feb 26 2024, 01:37 AM IST / Updated: Feb 26 2024, 03:14 PM IST

ಬೆಂಗಳೂರಿನ ಬಿಗ್‌ರಾಕ್ ಸೂಪರ್‌ಕ್ರಾಸ್‌ ಲೀಗ್‌ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿ ನಡೆದ ಚೊಚ್ಚಲ ಆವೃತ್ತಿಯ ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್(ಐಎಸ್‌ಆರ್‌ಎಲ್) ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‌ರಾಕ್ ಮೋಟಾರ್‌ ಸ್ಪೋರ್ಟ್ಸ್‌ ವಿಜಯಶಾಲಿಯಾಗಿ ಹೊರಹೊಮ್ಮಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಲ್ಲಿ ನಡೆದ ಚೊಚ್ಚಲ ಆವೃತ್ತಿಯ ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್(ಐಎಸ್‌ಆರ್‌ಎಲ್) ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‌ರಾಕ್ ಮೋಟಾರ್‌ ಸ್ಪೋರ್ಟ್ಸ್‌ ವಿಜಯಶಾಲಿಯಾಗಿ ಹೊರಹೊಮ್ಮಿದೆ. 

ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ತವರಿನ ಬಿಗ್‌ರಾಕ್ ತಂಡ ಐಎಸ್‌ಆರ್‌ಎಲ್ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಹಿಂದಿನ ರೇಸ್‌ಗಳಲ್ಲಿ ತೋರಿದ್ದ ಅತ್ಯುತ್ತಮ ಪ್ರದರ್ಶನ ತೋರಿದ್ದ ತಂಡ, ಅದನ್ನು ಇಲ್ಲೂ ಮುಂದುವರಿಸಿತು. ತಮ್ಮ ಕವಾಸಕಿ ಮೂಲಕ ಅದ್ಭುತ ಪ್ರದರ್ಶನ ತೋರಿದ ಸ್ಟಾರ್ ರೇಸರ್‌ ಮ್ಯಾಟ್ ಮಾಸ್ ಅವರು, 450ಸಿಸಿ ಅಂತಾರಾಷ್ಟ್ರೀಯ ವಿಭಾಗದಲ್ಲಿ ಚಾಂಪಿಯನ್‌ ಎನಿಸಿಕೊಂಡರು.

250ಸಿಸಿ ಅಂತಾರಾಷ್ಟ್ರೀಯ ರೇಸ್‌ನಲ್ಲಿ ಬಿಗ್‌ರಾಕ್ ಮೋಟಾರ್‌ ಸ್ಪೋರ್ಟ್ಸ್‌ನ ರೀಡ್ ಟೇಲರ್ ಟ್ರ್ಯಾಕ್‌ನಲ್ಲಿ ತಮ್ಮ ಪರಾಕ್ರಮ ಪ್ರದರ್ಶಿಸಿದ ಅಗ್ರಸ್ಥಾನಿಯಾದರೆ, 250ಸಿಸಿ ಇಂಡಿಯಾ ಏಷ್ಯಾ ಮಿಕ್ಸ್ ವಿಭಾಗದಲ್ಲಿ ಕವಾಸಕಿ ಸವಾರಿ ಮಾಡಿದ ಬಿಗ್‌ರಾಕ್ ಮೋಟಾರ್‌ ಸ್ಪೋರ್ಟ್‌ನ ರೈಡರ್ ಥಾನರತ್ ಪೆಂಜಾನ್ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

8000+ ಪ್ರೇಕ್ಷಕರು: ಬೆಂಗಳೂರಿನ ಚಿಕ್ಕಜಾಲದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆ ವೈಭವವನ್ನು 8000ಕ್ಕೂ ಹೆಚ್ಚು ಪ್ರೇಕ್ಷಕರು ಕಣ್ತುಂಬಿಕೊಂಡರು.

30000ಕ್ಕೂ ಹೆಚ್ಚು ಜನರನ್ನು ಅಕರ್ಷಿಸಿದ್ದ ಈ ಆವೃತ್ತಿಯು ಅಭಿಮಾನಿಗಳಲ್ಲಿ ಹೊಸ ಹುರುಪು ತುಂಬಿತು. ಅತ್ಯಂತ ವೇಗ, ಸಾಹಸ, ಧೈರ್ಯಶಾಲಿ ಕೌಶಲ್ಯಗಳು ರೇಸ್‌ ವೀಕ್ಷಿಸುತ್ತಿದ್ದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು.

ಮೈನವಿರೇಳಿಸುವ ಸಾಹಸ: ವೇಗವಾಗಿ ಬಂದು ಆಕಾಶದೆತ್ತರಕ್ಕೆ ಹಾರುತ್ತಿದ್ದ ಬೈಕ್‌ಗಳನ್ನು ಕಂಡು ಪ್ರೇಕ್ಷಕರು ರೋಮಾಂಚನಗೊಂಡರು.

ಎತ್ತರಕ್ಕೆ ಹಾರಿ ಪಲ್ಟಿ ಹೊಡೆಯುತ್ತಿದ್ದ ರೇಸರ್‌ಗಳು ಪ್ರೇಕ್ಷಕರಿಗೆ ಕಣ್ಮನ ತಣಿಸಿದರು. ರೈಡರ್‌ಗಳ ಸಾಹಸ, ಕೌಶಲ್ಯ ಕಂಡ ನೋಡುಗರು ಶಿಳ್ಳೆ-ಕೇಕೇ ಹಾಕುವ ಮೂಲಕ ಹರ್ಷ ವ್ಯಕ್ತಪಡಿಸಿದರು. 

ವಿವಿಧ ವಿಭಾಗದ ಅಂತಾರಾಷ್ಟ್ರೀಯ ಮಟ್ಟದ ರೇಸ್‌ಗಳನ್ನು ಕಂಡ ನೋಡುಗರು ಅವರ ಮೈನವಿರೇಳಿಸುವ ಸಾಹಸಕ್ಕೆ ಮನಸೋತರು.