60 ವರ್ಷ ಬಳಿಕ ಪಾಕಿಸ್ತಾನಕ್ಕೆ ಹೋಗುತ್ತಾ ಭಾರತ ಟೆನಿಸ್‌ ತಂಡ?

| Published : Dec 18 2023, 02:00 AM IST

ಸಾರಾಂಶ

ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ ಆಡಲು ಪಾಕಿಸ್ತಾನಕ್ಕೆ ಹೋಗುತ್ತಾ ಭಾರತ ತಂಡ. ಮುಂದಿನ ವರ್ಷ ಫೆಬ್ರವರಿಯಲ್ಲಿ ಪಂದ್ಯ. 60 ವರ್ಷ ಬಳಿಕ ಪಾಕ್‌ ನೆಲದಲ್ಲಿ ಕಾಲಿಡುತ್ತಾ ಭಾರತ ಟೆನಿಸ್‌ ತಂಡ.

- 2024ರ ಫೆಬ್ರವರಿ 3, 4ಕ್ಕೆ ಡೇವಿಸ್‌ ಕಪ್‌ ವಿಶ್ವ ಗುಂಪು 1 ಪ್ಲೇ-ಆಫ್‌ ಪಂದ್ಯ- 5 ಸದಸ್ಯರ ಭಾರತ ತಂಡ ಪ್ರಕಟ- ತಂಡದಲ್ಲಿ ಕರ್ನಾಟಕ ಮೂಲದ ನಿಕಿ ಪೂಣಚ್ಚಗೆ ಸ್ಥಾನ ನವದೆಹಲಿ: 60 ವರ್ಷಗಳ ಬಳಿಕ ಭಾರತ ಟೆನಿಸ್‌ ತಂಡ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ದಟ್ಟವಾಗಿದೆ. 2024ರ ಫೆ. 3, 4 ರಂದು ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪ್ಲೇ-ಆಫ್‌ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಬೇಕಿದ್ದು, ಈ ಪಂದ್ಯದ ಆತಿಥ್ಯ ಹಕ್ಕು ಪಾಕಿಸ್ತಾನಕ್ಕೆ ಸಿಕ್ಕಿದೆ.ಭಾನುವಾರ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಈ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ರಾಮ್‌ಕುಮಾರ್‌ ರಾಮನಾಥನ್‌, ಶ್ರೀರಾಮ್‌ ಬಾಲಾಜಿ, ಯೂಕಿ ಭಾಂಬ್ರಿ, ನಿಕಿ ಪೂಣಚ್ಚ ಹಾಗೂ ಸಾಕೇತ್‌ ಮೈನೇನಿ ಇದ್ದಾರೆ.ಈಗಾಗಲೇ ಪಂದ್ಯವನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸಲು ಎಐಟಿಎಫ್‌ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌ (ಐಟಿಎಫ್‌)ಗೆ ಮನವಿ ಸಲ್ಲಿಸಿದ್ದರೂ, ಇನ್ನೂ ನಿರ್ಧಾರ ಹೊರಬಿದ್ದಿಲ್ಲ. ಪಾಕಿಸ್ತಾನ ಟೆನಿಸ್‌ ಫೆಡರೇಶನ್‌ (ಪಿಟಿಎಫ್‌) ಪಂದ್ಯವನ್ನು ತನ್ನ ತವರಿನಲ್ಲೇ ನಡೆಸುವುದಾಗಿ ಪಟ್ಟು ಹಿಡಿದಿದೆ.ಒಂದು ವೇಳೆ ಐಟಿಎಫ್‌ ಪಂದ್ಯದ ಸ್ಥಳಾಂತರಕ್ಕೆ ಒಪ್ಪದೆ, ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದರೆ ಆಗ ಭಾರತ ತಂಡ ಪಂದ್ಯ ಕೈಚೆಲ್ಲಿದಂತಾಗಲಿದ್ದು, ವಿಶ್ವ ಗುಂಪು-2ಗೆ ಹಿಂಬಡ್ತಿ ಪಡೆಯಲಿದೆ.ಭಾರತ ಟೆನಿಸ್‌ ತಂಡ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ತೆರಳಿದ್ದು 1964ರಲ್ಲಿ. ಆ ಮುಖಾಮುಖಿಯಲ್ಲಿ ಭಾರತ 4-0ಯಲ್ಲಿ ಜಯಭೇರಿ ಬಾರಿಸಿತ್ತು. ಪಾಕಿಸ್ತಾನ ವಿರುದ್ಧ ಭಾರತ ಈ ವರೆಗೂ ಡೇವಿಸ್‌ ಕಪ್‌ನಲ್ಲಿ 8 ಬಾರಿ ಸೆಣಸಿದ್ದು, ಒಮ್ಮೆಯೂ ಸೋತಿಲ್ಲ.